ಬ್ಲೂವೇಲ್ ಚಾಲೆಂಜ್: ಆನ್‌ಲೈನ್ ಲಿಂಕ್ ತೆಗೆಯಲು ಆಗ್ರಹಿಸಿ ದಿಲ್ಲಿ ಹೈಕೋರ್ಟ್‌ಗೆ ಪಿಐಎಲ್

ಹೊಸದಿಲ್ಲಿ, ಆ. 16: ಜಾಗತಿಕವಾಗಿ ಹಲವು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಸವಾಲು ಆಧಾರಿತ ಆತ್ಮಹತ್ಯೆ ಆಟ ಬ್ಲೂವೇಲ್ ಚಾಲೆಂಜ್‌ನ ಲಿಂಕ್ ತೆಗೆಯಲು ಗೂಗಲ್, ಫೇಸ್‌ಬುಕ್ ಹಾಗೂ ಯಾಹೂನಂತಹ ಇಂಟರ್‌ನೆಟ್ ಕಂಪೆನಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.
ಈ ದಾವೆ ಸಕ್ರಿಯ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಜಸ್ಟಿಸ್ ಸಿ. ಹರಿ ಶಂಕರ್ ಅವರನ್ನೊಳಗೊಂಡ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬರಲಿದೆ.
ಜಗತ್ತಿನಾದ್ಯಂತ ಹಾಗೂ ಭಾರತದಲ್ಲಿ ಈ ಆಟದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ನ್ಯಾಯವಾದಿ ಗುರ್ಮೀತ್ ಸಿಂಗ್ ಪಿಐಎಲ್ ದಾಖಲಿಸಿದ್ದು, ಬ್ಲೂವೇಲ್ ಚಾಲೆಂಜ್‌ಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಅಪ್‌ಲೋಡ್ ಮಾಡದಂತೆ ಇಂಟರ್‌ನೆಟ್ ಸಂಸ್ಥೆಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನ್ಯಾಯಾಲಯದ ನಿರ್ದೇಶನವನ್ನು ಇಂಟರ್‌ನೆಟ್ ಕಂಪೆನಿಗಳು ಪಾಲಿಸುತ್ತಿವೆಯೇ ಎಂಬುದರ ಬಗ್ಗೆ ನಿಗಾ ಇರಿಸಲು ಕನಿಷ್ಠ ಐದು ಸದಸ್ಯರ ವಿಶೇಷ ತಂಡವನ್ನು ನಿಯೋಜಿಸಲು ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೂಡ ದಾವೆಯಲ್ಲಿ ಅವರು ಆಗ್ರಹಿಸಿದ್ದಾರೆ.





