ಗ್ರಾಮೀಣ ಅಂಚೆ ನೌಕರರ ಅನಿರ್ಧಿಷ್ಟ ಮುಷ್ಕರ: ಬೇಡಿಕೆ ಈಡೇರಿಕೆಗೆ ಆಗ್ರಹ

ಪುತ್ತೂರು, ಆ. 16: ಗ್ರಾಮೀಣ ಅಂಚೆ ನೌಕರರು ತಮ್ಮ ಹಲವಾರು ವರ್ಷದ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರೂ ಈ ಯಾವುದೇ ಪ್ರಯೋಜನವಾಗಿಲ್ಲ. ಗಾಣದೆತ್ತಿನಂತೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಅಂಚೆ ನೌಕರರು ಬ್ರಿಟೀಷರು ಬಿಟ್ಟಹೋದ ‘ಅಂಚೆ ಜೀತ ಪದ್ಧತಿ’ಯಲ್ಲಿ ಈಗಲೂ ಬದುಕುತ್ತಿದ್ದಾರೆ. ಯಾವುದೇ ಕೆಲಸ ಮಾಡದೆ ಕೇವಲ ಮೇಜು ಕುಟ್ಟಿ ಸಂಬಳ ಪಡೆಯುವ ರಾಜಕಾರಣಿಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಕೇಂದ್ರ ಸರ್ಕಾರ ಹಣ ನೀಡುತ್ತಿದೆ. ಆದರೆ ಇಲಾಖೆಯನ್ನು ಲಾಭದಾಯಕವಾಗಿ ಮಾರ್ಪಡಿಸಿದ ಗ್ರಾಮೀಣ ಅಂಚೆ ನೌಕರರ ಬಹುವರ್ಷದ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗೀಯ ಕಾರ್ಯದರ್ಶಿ ಸುನಿಲ್ ದೇವಾಡಿಗ ಆರೋಪಿಸಿದರು.
ಪುತ್ತೂರು ಅಂಚೆ ಕಚೇರಿ ಮುಂಭಾಗದಲ್ಲಿ ಬುಧವಾರ ನಡೆದ ’ಗ್ರಾಮೀಣ ಅಂಚೆ ನೌಕರರ ವೇತನ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಿ’ ಹೋರಾಟದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು. 2016ರಲ್ಲಿ ನೀಡಲಾದ ಕಮಲೇಶಚಂದ್ರ ವರದಿಯನ್ನು ಜಾರಿಗೊಳಿಸದಿದ್ದರೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಅವರು ಎಚ್ಚರಿಸಿದರು.
ಗ್ರಾಮೀಣ ಭಾಗದ ಅಂಚೆ ನೌಕರರು ಇಂದಿಗೂ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದು, ರೈತರ, ವೃದ್ಧರ ಅಂಗವಿಕಲರ ಮನೆಬಾಗಿಲಿಗೆ ತೆರಳಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ ಇನ್ನಿತರ ಪತ್ರವ್ಯವಹಾರ ನಡೆಸುತ್ತಿದ್ದಾರೆ. ಅಂಚೆ ಇಲಾಖೆ ಲಾಭದಾಯಕವಾಗಿ ನಡೆಯಲು ಈ ಗ್ರಾಮೀಣ ಅಂಚೆ ನೌಕರರ ಶೇ 80 ರಷ್ಟು ಶ್ರಮವೇ ಕಾರಣವಾಗಿದೆ. ಆದರೂ ಈ ನೌಕರರ ಜೀವನ ಸ್ಥಿತಿ ನರಕಸದೃಶವಾಗಿದೆ. ಕಮಲೇಶಚಂದ್ರ ವರದಿಯನ್ನು ಜಾರಿಗೊಳಿಸಿ ಎಂದು ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದ್ದರೂ ಕೇಂದ್ರ ಸರ್ಕಾರ ಜಾಣಕಿವುಡುತನ ಪ್ರದರ್ಶಿಸುತ್ತಿದೆ ಎಂದು ಅವರು ಆರೋಪಿಸಿದರು.
ಕಮಲೇಶಚಂದ್ರ ವರದಿಯನ್ನು ಸಂಘಟನೆ ನೀಡಿದ ಮಾರ್ಪಾಡುಗಳೊಂದಿಗೆ ತಕ್ಷಣ ಜಾರಿಗೊಳಿಸಬೇಕು. ಬ್ರಾಂಚ್ ಅಂಚೆ ಕಚೇರಿಗಳ ಅವಧಿಯನ್ನು 8 ಗಂಟೆಗೆ ನಿಗಧಿಗೊಳಿಸಿ ಈ ನೌಕರರನ್ನು ಖಾಯಂಗೊಳಿಸಬೇಕು. ದೆಹಲಿ ಮತ್ತು ಮದ್ರಾಸ್ ಆದೇಶದಂತೆ ನಿವೃತ್ತಿ ವೇತನ ನೀಡಬೇಕು. ’ಗುರಿ ನಿಗಧಿ’ ಹೆಸರಿನಲ್ಲಿ ನಡೆಸಲಾಗುತ್ತಿರುವ ಗ್ರಾಮೀಣ ಅಂಚೆ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಎಂಬ ಪ್ರಮುಖ 4 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಅಂಚೆ ನೌಕರರು ಬುಧವಾರ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದಾರೆ.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಗೌರವಾಧ್ಯಕ್ಷ ಜಗತ್ಪಾಲ್ ಹೆಗ್ಡೆ, ಕರ್ನಾಟಕ ವಲಯ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳಂಜ, ವಿಭಾಗೀಯ ಅಧ್ಯಕ್ಷ ವಿಠಲ ಎಸ್.ಪೂಜಾರಿ, ಕಾರ್ಕಳ ಉಪವಿಭಾಗದ ಅಧ್ಯಕ್ಷ ಅಶೋಕ್ ಅಂಡಾರು, ಪುತ್ತೂರು ವಿಭಾಗದ ಕೋಶಾಧಿಕಾರಿ ಶಕಿಲ ಅವರು ಮುಷ್ಕರದ ನೇತೃತ್ವ ವಹಿಸಿದ್ದರು.







