ಶೃತಿ, ಲಯದಿಂದ ವಿಶ್ವದಲ್ಲಿ ಶಾಂತಿ ಸಾಧ್ಯ: ಡಾ. ಎ.ಪಿ. ಭಟ್

ಪುತ್ತೂರು, ಆ. 16: ಪ್ರತಿಯೊಂದು ವಿಚಾರದಲ್ಲಿ ಲಯ ಮತ್ತು ಶೃತಿಗಳಿದ್ದರೆ ವಿಶ್ವವೇ ಶಾಂತಿಯಲ್ಲಿರುತ್ತದೆ. ಅದರಂತೆ ಪ್ರತಿಯೊಬ್ಬರ ಉಸಿರಾಟದಲ್ಲಿನ ಲಯ, ಶೃತಿಯ ಮೇಲೆ ಆತನ ಇಡೀ ಶರೀರದ ಆರೋಗ್ಯವನ್ನು ಪರಿಶೀಲಿಸಬಹುದು ಎಂದು ಡಾ.ಎ.ಪಿ.ಭಟ್ ಹೇಳಿದರು.
ಅವರು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಸಾಧನಾ ಸಂಗೀತ ವಿದ್ಯಾಲಯದಿಂದ ನಡೆಯುವ ಸ್ವರಮಾಲಾ- 36, ತಿಂಗಳ ಸರಣಿ ಸಂಗೀತ ಸೇವಾ ಕಾರ್ಯಕ್ರಮಕ್ಕೆ ಭಾನುವಾರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಧನಾ ಸಂಗೀತ ವಿದ್ಯಾಲಯದ ಸಂಗೀತ ಗುರುಗಳಾದ ವಿದುಷಿ ಸುಚಿತ್ರಾ ಹೊಳ್ಳ ಸಂಗೀತಕ್ಷೇತ್ರದಲ್ಲಿ ಶ್ರೀಕೃಷ್ಣನ ಪಾತ್ರದ ಕುರಿತಾಗಿ ಮಾತನಾಡಿ, ಸಂಗೀತದ ಹೆಚ್ಚಿನಕೃತಿ ಕೀರ್ತನೆಗಳು ಶ್ರೀಕೃಷ್ಣನ ಕುರಿತಾಗಿದ್ದು, ಪ್ರತೀ ಸಂಗೀತ ಕಚೇರಿಗಳಲ್ಲಿ ಮೊದಲು ಹಾಡುವ ವರ್ಣಗಳಲ್ಲಿ ಹೆಚ್ಚಿನ ವರ್ಣಗಳು ಶ್ರೀಕೃಷ್ಣನ ಮೇಲೆ ರಚಿತವಾಗಿದೆ.ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಶ್ರೀ ಕೃಷ್ಣನಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎಂದರು.
ವೇದಿಕೆಯಲ್ಲಿ ಸ್ವರಮಾಲಾ ಸಮಿತಿಯ ಸದಸ್ಯೆ ಪಾವನಾ ಪ್ರಸಾದ್ ಉಪಸ್ಥಿತರಿದ್ದರು. ಸಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಪವಿತ್ರ ಕೆ. ಹೊಳ್ಳ, ಶುೃತಿಕೆ, ಸಹನಾ ಕುಕ್ಕಿಲ, ಪಂಚಮಿ ಸರ್ಪಂಗಳ ಇವರುಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪಿಟೀಲಿನಲ್ಲಿ ವಿದ್ವಾನ್ ಜಗದೀಶ ಕೊರೆಕ್ಕಾನ ಹಾಗೂ ಮೃದಂಗದಲ್ಲಿ ವಸಂತ ಕೃಷ್ಣ ಕಾಂಚನ ಸಹಕರಿಸಿದರು.
ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಸಾತ್ವಿಕ್ ಬೆಡೇಕರ್ ಪ್ರಾರ್ಥಿಸಿದರು. ಸೌಪರ್ಣಿಕ ಬೆಡೇಕರ್ ಸ್ವಾಗತಿಸಿದರು. ಮಯೂರಿ ವಂದಿಸಿದರು.







