ನಕ್ಸಲರಿಗೆ ಬೆಂಬಲ ಆರೋಪ: ಜಾಮೀನು ಪಡೆದ ವಿಠಲ ಮಲೆಕುಡಿಯ
ಬೆಳ್ತಂಗಡಿ, ಆ. 16: ಮಂಗಳೂರು ವಿಶ್ವವಿಧ್ಯಾನಿಲಯದ ಪತ್ರಿಕೋಧ್ಯಮ ವಿಭಾಗದ ವಿದ್ಯಾ ರ್ಥಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಅವರ ವಿರುದ್ಧ ನಕ್ಸಲ್ ನಿಗ್ರಹ ಪಡೆಯವರು ದಾಖಲಿಸಿರುವ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ ಸೆಕ್ಷನ್ ಕೋರ್ಟಿನಲ್ಲಿ ಇಂದು ಆರಂಭಿಸಲಾಗಿದ್ದು, ವಿಠಲ ಮಲೆಕುಡಿಯ ಅವರು ನ್ಯಾಯಾಲಯಕ್ಕೆ ಹಾಜರಾಗಿ ಇಂದು ಜಾಮೀನು ಪಡೆದುಕೊಂಡಿದ್ದಾರೆ.
ವಿಠಲ ಅವರ ವಿರುದ್ಧ 2012 ರಲ್ಲಿ ನಕ್ಸಲರಿಗೆ ಬೆಂಬಲ ನೀಡುತ್ತಿರುವುದಾಗಿ ಆರೋಪಿಸಿ ನಕ್ಸಲ್ ನಿಗ್ರಹದಳದವರು ಪ್ರಕರಣ ದಾಖಲಿಸಿದ್ದರು.
ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು ಹಾಗೂ ರಾಜ್ಯವ್ಯಾಪ್ತಿಯಾಗಿ ಹೋರಾಟಗಳು ನಡೆದಿತ್ತು. ಕೊನೆಗೂ ಬೆಳ್ತಂಗಡಿ ನ್ಯಾಯಾಲಯವು ವಿಠಲ ಮಲೆಕುಡಿಯ ಅವರಿಗೆ ಜಾಮೀನು ನೀಡಿತ್ತು.
ಇದೀಗ ಪ್ರಕರಣವನ್ನು ಮಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ನಡೆಯಬೇಕಾಗಿದೆ. ವಿಠಲ ಅವರ ಪರವಾಗಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳಿಪಾಡಿ ವಾದಿಸುತ್ತಿದ್ದಾರೆ.





