ವಿಶ್ವ ಕುಬ್ಜರ ಗೇಮ್ಸ್: 37 ಪದಕ ಬಾಚಿಕೊಂಡ ಭಾರತ

ಟೊರಂಟೊ, ಆ.16: ಕಳೆದ ವಾರ ಕೆನಡಾದಲ್ಲಿ ಕೊನೆಗೊಂಡ ವಿಶ್ವ ಕುಬ್ಜರ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು 37 ಪದಕಗಳನ್ನು ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ನೀಲಿಬಣ್ಣದ ಜರ್ಸಿಯನ್ನು ಧರಿಸಿದ್ದ 21 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಕೆನಡಾದ ಭಾರತದ ಕಾನ್ಸುಲ್ ಜನರಲ್ ದಿನೇಶ್ ಭಾಟಿಯಾ ಗೌರವಿಸಿದರು. ಭಾರತ ತಂಡ ಅಂತಾರಾಷ್ಟ್ರೀಯ ಕುಬ್ಜರ ಸ್ಪರ್ಧೆಯಲ್ಲಿ 15 ಚಿನ್ನ ಸಹಿತ ಒಟ್ಟು 37 ಪದಕಗಳನ್ನು ಜಯಿಸಿದ್ದಾರೆ ಎಂದು ಭಾಟಿಯಾ ತಿಳಿಸಿದ್ದಾರೆ.
ಏಳನೆ ಆವೃತ್ತಿಯ ವಿಶ್ವ ಕುಬ್ಜರ ಗೇಮ್ಸ್ ಕೆನಡಾದ ಒಂಟಾರಿಯೊ ಯುನಿವರ್ಸಿಟಿಯಲ್ಲಿ ವಾರಗಳ ಕಾಲ ನಡೆದಿದ್ದು ಇದರಲ್ಲಿ 24 ದೇಶಗಳ ಸುಮಾರು 400 ಅಥ್ಲೀಟ್‌ಗಳು ಭಾಗವಹಿಸಿದ್ದರು.
ವಿಶ್ವ ಕುಬ್ಜರ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಭಾರತದ ಅಥ್ಲೀಟ್‌ಗಳ ಪೈಕಿ ಜೊಬಿ ಮ್ಯಾಥ್ಯೂಸ್ ಎರಡು ಚಿನ್ನ ಸಹಿತ ಒಟ್ಟು 6 ಪದಕಗಳನ್ನು ಜಯಿಸಿದ್ದಾರೆ.
‘‘ನನಗೆ ಅಪೂರ್ವ ಅನುಭವವಾಯಿತು. ನಾನು ಬ್ಯಾಡ್ಮಿಂಟನ್ ಡಬಲ್ಸ್, ಬ್ಯಾಡ್ಮಿಂಟನ್ ಸಿಂಗಲ್ಸ್, ಶಾಟ್‌ಪುಟ್, ಜಾವೆಲಿನ್, ಡಿಸ್ಕಸ್ ಎಸೆತ ಹಾಗೂ ಪವರ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಿದ್ದೇನೆ’’ ಎಂದು 2 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಜಯಿಸಿರುವ ಮ್ಯಾಥ್ಯೂಸ್ ಪ್ರತಿಕ್ರಿಯಿಸಿದ್ದಾರೆ.
‘‘ಇದು ನಮ್ಮ ಒಲಿಂಪಿಕ್ಸ್, ಕುಳ್ಳರ ಒಲಿಂಪಿಕ್ಸ್. ಇದು ನಮ್ಮಂತಹ ಅಥ್ಲೀಟ್‌ಗಳಿಗೆ ಅತ್ಯಂತ ಮುಖ್ಯವಾಗಿದೆ’’ ಎಂದು ಚಿನ್ನ ಸಹಿತ ಐದು ಪದಕ ಜಯಿಸಿದ್ದ ಇನ್ನೋರ್ವ ಅಥ್ಲೀಟ್ ಅರುಣಾಚಲಂ ನಳಿನಿ ಹೇಳಿದ್ದಾರೆ.
‘‘ಸ್ವಾತಂತ್ರ ದಿನಾಚರಣೆಗೆ ದೇಶಕ್ಕೆ ದೊಡ್ಡ ಉಡುಗೊರೆ ನೀಡಲು ನಾವು ಬಯಸಿದ್ದೆವು. ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ದೇಶಕ್ಕೆ 15 ಚಿನ್ನದ ಪದಕ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ’’ ಎಂದು ಭಾರತದ ಕೋಚ್ ಹಾಗೂ ಮ್ಯಾನೇಜರ್ ಶಿವಾನಂದ ಗುಂಜಾಲ್ ಹೇಳಿದ್ದಾರೆ.
‘‘ನಮಗೆ ಕೇಂದ್ರ, ರಾಜ್ಯ ಸರಕಾರವಾಗಲಿ ಅಥವಾ ಪ್ರಾಯೋಜಕರಾಗಲಿ ನೆರವು ನೀಡಿಲ್ಲ. ಹೆಚ್ಚಿನ ಅಥ್ಲೀಟ್‌ಗಳು ಸಾಲ ಮಾಡಿ ಕೆನಡಾಕ್ಕೆ ಪ್ರಯಾಣಿಸಿದ್ದಾರೆ. ಹಣಕಾಸಿನ ಸಮಸ್ಯೆಯ ನಡುವೆಯೂ ಸ್ಫೂರ್ತಿಯುತ ಪ್ರದರ್ಶನ ನೀಡಿದ್ದಾರೆ’’ಎಂದು ಮೂರು ಚಿನ್ನ ಜಯಿಸಿದ್ದಲ್ಲದೆ ತಂಡದ ಪ್ರಯಾಣದ ಜವಾಬ್ದಾರಿ ಹೊತ್ತಿದ್ದ ಸಿ.ವಿ. ರಾಜಣ್ಣ ಹೇಳಿದ್ದಾರೆ.







