ದಂಡುಪಾಳ್ಯದ ಮೂವರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ

ಬೆಂಗಳೂರು, ಆ.16: ಮೈಸೂರಿನಲ್ಲಿ ನಡೆದಿದ್ದ ಸುಶೀಲ ಎಂಬುವರ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ದಂಡುಪಾಳ್ಯ ಹಂತಕರಾದ ದೊಡ್ಡಹನುಮ, ವೆಂಕಟೇಶ್ ಹಾಗೂ ನಲ್ಲತಿಮ್ಮನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್, ದರೋಡೆ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿ ಮೂವರಿಗೂ ತಲಾ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಸುಶೀಲಾ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ದಂಡುಪಾಳ್ಯದ ಸದಸ್ಯರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಗಲ್ಲು ಶಿಕ್ಷೆ ರದ್ದು ಕೋರಿ ಆರೋಪಿಗಳು ಹೈಕೊರ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಬುಧವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಕೊಲೆ ಆರೋಪ ಸಂಬಂಧ ದಂಡುಪಾಳ್ಯದ ಹಂತಕರಾದ ದೊಡ್ಡಹನುಮ, ವೆಂಕಟೇಶ್ ಹಾಗೂ ನಲ್ಲತಿಮ್ಮನಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿತು. ಆದರೆ, ದರೋಡೆ ಪ್ರಕರಣದಲ್ಲಿ ಈ ಮೂವರನ್ನು ದೋಷಿಗಳನ್ನು ಕಾಯಂಗೊಳಿಸಿ, ತಲಾ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿತ್ತು. ಒಂದೊಮ್ಮೆ ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಜೈಲು ಅನುಭವಿಸಬೇಕು ಎಂದು ಆದೇಶಿಸಿತು.
ಅಲ್ಲದೆ, ಈ ಮೂವರು ಈಗಾಗಲೇ 10ಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸುವ ಹಿನ್ನೆಲೆಯಲ್ಲಿ ಬೇರೆ ಪ್ರಕರಣಗಳಲ್ಲಿ ಬಂಧನದ ಅಗತ್ಯವಿಲ್ಲ ಎಂದಾದರೆ ಅವರುಗಳನ್ನು ಬಿಡುಗಡೆ ಮಾಡಬಹುದು ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಆರೋಪಿ ಮುನಿೃಷ್ಣನನ್ನು ಪೀಠ ಖುಲಾಸೆಗೊಳಿಸಿದೆ.
ಸುಶೀಲ ಅವರನ್ನು ಈ ಮೂವರೇ ಕೊಲೆ ಮಾಡಿರುವುದಕ್ಕೆ ಯಾವುದೇ ಸಾಕ್ಷಾಧಾರ ಇಲ್ಲ. ಆದರೆ, ಸುಶೀಲ ಅವರ ಮನೆಯಲ್ಲಿ ದರೋಡೆ ಮಾಡಿದ್ದ ಆಭರಣಗಳನ್ನು ಪೊಲೀಸರು ಈ ಮೂವರಿಂದ ವಶಪಡಿಸಿಕೊಂಡಿದ್ದಾರೆ. ದರೋಡೆ ಮಾಡಿದ ಆಭರಣಗಳನ್ನು ಸುಶೀಲ ಕಟುಂಬದವರು ಗುರುತಿಸಿದ್ದಾರೆ. ಹೀಗಾಗಿ, ದರೋಡೆ ಪ್ರಕರಣದಲ್ಲಿ ಈ ಮೂವರು ದೋಷಿಗಳು ಎಂದು ತೀರ್ಮಾನಿಸಿ, ತಲಾ 10 ವರ್ಷ ಜೈಲು ವಿಧಿಸಲಾಗುತ್ತಿದೆ. ಆದರೆ, ಕೊಲೆ ಪ್ರಕರಣಕ್ಕೆ ಸಾಕ್ಷಾಧಾರಗಳ ಕೊರತೆಯಿರುವುದರಿಂದ ಗಲ್ಲು ಶಿಕ್ಷೆ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ಸ್ಪಷ್ಟಪಡಿಸಿದೆ.
ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2000ರ ನ.2ರಂದು ಸುಶೀಲ ಎಂಬುವರನ್ನು ಕೊಲೆ ಮಾಡಿ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿದ ಆರೋಪ ಸಂಬಂಧ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಸದಸ್ಯರಾದ ದೊಡ್ಡಹನುಮ, ವೆಂಕಟೇಶ್, ಮುನಿಕೃಷ್ಣ ಹಾಗೂ ನಲ್ಲತಿಮ್ಮ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯವು 2010ರಲ್ಲಿ ಈ ನಾಲ್ವರನ್ನೂ ದೋಷಿಗಳು ಎಂದು ತೀರ್ಮಾನಿಸಿ ಗಲ್ಲು ಶಿಕ್ಷೆ ವಿಧಿಸಿತ್ತು.







