ಜೆಡಿಎಸ್ ಬಂಡಾಯ ಶಾಸಕರು ದೆಹಲಿಗೆ : ಕಾಂಗ್ರೆಸ್ ಸೇರ್ಪಡೆಗೆ ಹೈಕಮಾಂಡ್‌ನೊಂದಿಗೆ ಚರ್ಚೆ
ಬೆಂಗಳೂರು, ಆ. 16: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಜೆಡಿಎಸ್‌ನಿಂದ ಅಮಾನತ್ತುಗೊಂಡಿರುವ ಏಳು ಮಂದಿ ಬಂಡಾಯ ಶಾಸಕರು, ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂಬಂಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿಗೆ ಹೊಸದಿಲ್ಲಿಗೆ ತೆರಳಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರಾದ ಝಮೀರ್ ಅಹ್ಮದ್ ಖಾನ್, ಎಚ್.ಸಿ. ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ, ಚಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ ಅವರು ನಾಳೆ ರಾಹುಲ್ ಗಾಂಧಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಏಳು ಮಂದಿ ಬಂಡಾಯ ಶಾಸಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ ಮೊದಲ ವಾರದಲ್ಲಿ ಏಳು ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ರಾಹುಲ್ ಗಾಂಧಿ ಸೇರಿ ವರಿಷ್ಟರು ಹಸಿರು ನಿಶಾನೆ ತೋರಲಿದ್ದಾರೆಂದು ಹೇಳಲಾಗಿದೆ.
ಈ ಮಧ್ಯೆ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಭರ್ತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿ ಇನ್ನಿತರ ಪ್ರಮುಖಂಡರು, ಹೈಕಮಾಂಡ್‌ನೊಂದಿಗೆ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.





