ಅವನೀತ್ ಸಿಧುಗೆ ಚಿನ್ನ ಸಹಿತ ನಾಲ್ಕು ಪದಕ
ವಿಶ್ವ ಪೊಲೀಸ್ ಕ್ರೀಡಾಕೂಟ

ಅಮೃತಸರ, ಆ.16: ಶೂಟರ್ ಹಾಗೂ ಉಪ ಪೊಲೀಸ್ ಅಧೀಕ್ಷಕಿ (ಡಿಎಸ್ಪಿ)ಅವನೀತ್ ಕೌರ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪೊಲೀಸ್ ಹಾಗೂ ಅಗ್ನಿಶಾಮಕದಳ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸಹಿತ ಒಟ್ಟು ನಾಲ್ಕು ಪದಕಗಳನ್ನು ಜಯಿಸಿದ್ದಾರೆ. 50 ಮೀ.ನಲ್ಲಿ ಚಿನ್ನ ಜಯಿಸಿದ್ದ ಕೌರ್ ರೈಫಲ್ ಶೂಟಿಂಗ್ ಸ್ಪರ್ಧೆಯ ವಿವಿಧ ಇವೆಂಟ್‌ಗಳಲ್ಲಿ ಭಾಗವಹಿಸಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
ಅವನೀತ್ ಭಾರತ ಮಾಜಿ ಹಾಕಿ ಆಟಗಾರ ಹಾಗೂ ಪಂಜಾಬ್‌ನ ಪೊಲೀಸ್ ಇಲಾಖೆಯಲ್ಲಿ ಎಸ್ಪಿ ಆಗಿರುವ ರಾಜ್‌ಪಾಲ್ ಸಿಂಗ್‌ರನ್ನು ವಿವಾಹವಾಗಿದ್ದಾರೆ. ಅವನೀತ್ ಹಾಗೂ ಆಕೆಯ ಪತಿ ರಾಜ್‌ಪಾಲ್ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. ಅವನೀತ್ 2006ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ 18ನೆ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಲಾ 1 ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡಿದ್ದಾರೆ. ಅದೇ ವರ್ಷ ಕತರ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಜಯಿಸಿದ್ದರು. 2008ರಲ್ಲಿ ಅವನೀತ್‌ಗೆ ಅರ್ಜುನ ಪ್ರಶಸ್ತಿ ಲಭಿಸಿತ್ತು. ಪಂಜಾಬ್ ರಾಜ್ಯ ಸರಕಾರದಿಂದ ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವನೀತ್ ವಿವಿಧ ದೇಶಗಳಲ್ಲಿ ನಡೆದಿರುವ 28 ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.





