ಮಹಾರಾಷ್ಟ್ರ: 8 ದಿನದಲ್ಲಿ 34 ರೈತರ ಆತ್ಮಹತ್ಯೆ

ಮುಂಬೈ, ಆ.17: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕಳೆದ ಎಂಟು ದಿನದಲ್ಲಿ 34 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸರಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರದೇಶದಲ್ಲಿ ಈ ವರ್ಷದ ಮುಂಗಾರು ಮಳೆ ಸರಾಸರಿ ಮಟ್ಟಕ್ಕಿಂತ ಕಡಿಮೆಯಾಗಿದೆ. ಇದೇ ಪ್ರದೇಶದಲ್ಲಿ ಈ ವರ್ಷದ ಜನವರಿ 1ರಿಂದ ಆಗಸ್ಟ್ 15ರವರೆಗಿನ ಅವಧಿಯಲ್ಲಿ 580 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು ಬೀಡ್ ಜಿಲ್ಲೆಯೊಂದರಲ್ಲೇ 107 ಆತ್ಮಹತ್ಯೆ ಪ್ರಕರಣ ವರದಿಯಾಗಿದೆ ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ಕಚೇರಿ ಸರಕಾರಕ್ಕೆ ವರದಿ ನೀಡಿದೆ.ಮಳೆಯ ಕೊರತೆ ಕಾರಣ ಮರಾಠವಾಡ ಪ್ರದೇಶದಲ್ಲಿ ಮುಂಗಾರು ಬೆಳೆಗೆ ಭಾರೀ ಸಮಸ್ಯೆ ಎದುರಾಗಿರುವುದಾಗಿಯೂ ವರದಿ ತಿಳಿಸಿದೆ.
ಆಗಸ್ಟ್ 15ರ ಬಳಿಕ ಉತ್ತಮ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಕೆಲವೆಡೆ ಮಾತ್ರ ಅಲ್ಪಸ್ವಲ್ಪ ಮಳೆಯಾಗಿದೆ ಎಂದು ರೈತರನ್ನು ಒಳಗೊಂಡಿರುವ ರಾಜಕೀಯ ಸಂಘಟನೆ ‘ಸ್ವಾಭಿಮಾನ್ ಶೆಟ್‌ಕಾರಿ ಸಂಘಟನೆ’ಯ ವಕ್ತಾರ ಯೋಗೇಶ್ ಪಾಂಡೆ ಹೇಳಿದ್ದಾರೆ. ಮಹಾರಾಷ್ಟ್ರದ 355 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಈ ಬಾರಿ ಶೇ.75ರಷ್ಟೂ ಮಳೆಯಾಗಿಲ್ಲ ಎಂದು ರಾಜ್ಯದ ಕೃಷಿ ಇಲಾಖೆ ತಿಳಿಸಿದೆ.





