ಆ.20: ದೇವರಾಜ ಅರಸು ಗೌರವಾರ್ಥ ನೆನಪಿನ ಸಮಾರಂಭ
ಬೆಂಗಳೂರು, ಆ.17: ಅಹಿಂದ ಸಂಘಟನೆ ಸ್ಥಾಪನೆಯಾಗಿ 20 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇವರಾಜ ಅರಸು ಗೌರವಾರ್ಥ ನೆನಪಿನ ಸಮಾರಂಭವನ್ನು ಆ.20ರಂದು ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಮುಖಂಡ ಮಾವಳ್ಳಿ ಶಂಕರ್, ದೇಶದ ಶೇ.70 ಕ್ಕೂ ಅಧಿಕ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿವೆ. ಆದರೆ, ಇಂದಿಗೂ ದೇಶದ ಸಂಪತ್ತಿನಲ್ಲಿ ಸಮಾನವಾದ ಪಾಲು ಸಿಕ್ಕಿಲ್ಲ. ದಲಿತ, ಹಿಂದುಳಿದ ವರ್ಗಗಳ ಜನರ ಮೇಲಿನ ದಬ್ಬಾಳಿಕೆ, ಶೋಷಣೆ ನಿಂತಿಲ್ಲ ಎಂದು ಹೇಳಿದರು.
ಭಾರತ ಸ್ವಾತಂತ್ರ ಪಡೆದು 7 ದಶಕಗಳನ್ನು ಪೂರೈಸುತ್ತಿದೆ. ಆದರೆ, ರೈತರು, ಕೃಷಿ ಕೂಲಿ ಕಾರ್ಮಿಕರು ಗೌರವಯುತವಾಗಿ ಬದುಕಲು ಯೋಗ್ಯವಾದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಬಲಿಷ್ಠ ಜಾತಿಗಳು ತಳ ಸಮುದಾಯಗಳ ಹಕ್ಕು ಮತ್ತು ಸೌಲಭ್ಯಗಳನ್ನು ದೂರ ಸರಿಸುವ ಪ್ರಯತ್ನ ಮಾಡುತ್ತಲೇ ಬರುತ್ತಿವೆ. ಜಾತಿ-ಧರ್ಮಗಳ ಹೆಸರಿನಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ, ತಳ ಸಮುದಾಯಗಳು ಧ್ವನಿ ಎತ್ತಲಾಗದ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಅಲ್ಪಸಂಖ್ಯಾತರನ್ನು ಕೋಮುವಾದದ ಕೂಪಕ್ಕೆ ತಳ್ಳಿ, ಆಹಾರ ಪದ್ಧತಿ, ನಂಬಿಕೆ, ಆಚಾರ-ವಿಚಾರಗಳ ನೆಪವೊಡ್ಡಿ ಅಮಾನುಷವಾದ ದೌರ್ಜನ್ಯಗಳು ನಡೆಸುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಮೀಸಲಾತಿ ಕಲ್ಪಿಸಿದೆ. ಆದರೆ, ವ್ಯವಸ್ಥಿತವಾಗಿ ತಳ ಸಮುದಾಯಗಳಿಗೆ ಸಿಗದ ರೀತಿಯಲ್ಲಿ ವಂಚಿಸಲಾಗುತ್ತಿದೆ. ಅದರ ಭಾಗವಾಗಿ, ಇಂದಿಗೂ ತಳ ಸಮುದಾಯಗಳಿಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಅವರು ತಿಳಿಸಿದರು.
ಮಂಡಲ್ ವರದಿಯ ಪ್ರಕಾರ ದೇಶದ ಉನ್ನತ ಅಧಿಕಾರದಲ್ಲಿ ಶೇ.4 ರಷ್ಟಿರುವ ಮೇಲ್ಜಾತಿಗಳು ಶೇ.74 ರಷ್ಟು ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಶೇ.96 ರಷ್ಟು ಜನರು ಕೇವಲ ಶೇ.26 ರಷ್ಟು ಹುದ್ದೆಗಳಲ್ಲಿದ್ದಾರೆ. ಇದನ್ನು ನೋಡಿದರೆ ನಮ್ಮ ದೇಶದಲ್ಲಿ ತಳ ಸಮುದಾಯಗಳ ಪರಿಸ್ಥಿತಿ ಎಷ್ಟೊಂದು ಹೀನ ಸ್ಥಿತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ನೆನಪಿನ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಚಿವರಾದ ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಉಮಾಶ್ರೀ, ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.







