ಶಾಲಾ ಶಿಕ್ಷಣ ಸಮಸ್ಯೆ-ಸವಾಲು ಕುರಿತು ಇಂದಿನಿಂದ ಸಮ್ಮೇಳನ
ಬೆಂಗಳೂರು, ಆ.17: ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ವತಿಯಿಂದ ಶಾಲಾ ಶಿಕ್ಷಣದ ಸಮಸ್ಯೆಗಳು-ಸವಾಲುಗಳ ಕುರಿತು ಚರ್ಚಿಸುವ ಸಲುವಾಗಿ ಆ.18 ರಿಂದ 20 ರವರೆಗೆ ಸದಾಶಿವ ನಗರದಲ್ಲಿರುವ ರಾಮನ್ ರಿಸರ್ಚ್ ಸೆಂಟರ್‌ನಲ್ಲಿ ರಾಜ್ಯಮಟ್ಟದ ಸಮ್ಮೇಳನ ಏರ್ಪಡಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ.ರಘುನಾಥನ್ ಸಮ್ಮೇಳನದಲ್ಲಿ ಇತ್ತೀಚಿನ ಶೈಕ್ಷಣಿಕ ನೀತಿಗಳು, ಶಿಕ್ಷಣದ ವಿಧಾನಗಳು ಹಾಗೂ ಶಿಕ್ಷಕರು ತರಗತಿಗಳನ್ನು ನಿಭಾಯಿಸಬಹುದಾದ ವಿಧಾನಗಳ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಶಾಲಾ ಶಿಕ್ಷಕರ ಪಾತ್ರ ಕುರಿತು ಡಾ.ನೀರಜ ರಾಘವನ್, ಪ್ರೊ.ಗೌತಮ್ ಗೋಪಾಲ ರತ್ನಂ ಉಪನ್ಯಾಸ ನೀಡಲಿದ್ದಾರೆ. ಪಠ್ಯಕ್ರಮ ಮುದ್ರಣಕ್ಕೆ ಸಂಬಂಧಿಸಿದಂತೆ ಪ್ರೊ.ನಮಿತಾ ರಂಗನಾಥನ್, ಸಿ.ಎನ್.ಸುಬ್ರಮಣಿಯನ್, ಎಂ.ಎ.ಖಾದರ್, ಪ್ರೊ.ಪ್ರವೀಣ್ ವಿಷಯ ಮಂಡನೆ ಮಾಡುವರು.
ಶಾಲಾ ಶಿಕ್ಷಣದಲ್ಲಿ ರಾಜ್ಯದ ಪಾತ್ರ ವಿಷಯಕ್ಕೆ ಸಂಬಂಧಿಸಿದಂತೆ ಪ್ರೊ.ಅನಿಲ್ ಸದ್ಗೋಪಾಲ್, ಪ್ರೊ.ಶಾಂತ ಸಿನ್ಹಾ, ಪ್ರೊ.ಅರುಣ ರತ್ನಂ, ಪ್ರೊ.ರಾಮಾನುಜಂ ಹಾಗೂ ಮಾನವಶಾಸ್ತ್ರ, ವಿಜ್ಞಾನ ಮತ್ತು ಸಮಾಜ ವಿಷಯದ ಕುರಿತು ಪ್ರೊ.ಫರೀದಾ ಖಾನ್, ಪ್ರೊ.ಉಷಾ ರಾಮನ್, ಪ್ರೊ.ರಾಜಾರಾಮ್ ನಿತ್ಯಾನಂದ, ಡಾ. ಕಮಲಾ ಮುಕುಂದ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.







