ಶಾಲೆಗಳ ಮುಂದೆ ಶುಲ್ಕದ ವಿವರ ಹಾಕಲು ಒತ್ತಾಯ
ಬೆಂಗಳೂರು, ಆ.17: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ಎಲ್ಲ ಶಾಲೆಗಳ ಪ್ರವೇಶದ ಮುಂಭಾಗದಲ್ಲಿ ಶುಲ್ಕದ ವಿವರಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ಒತ್ತಾಯಿಸಿದೆ.
ಗುರುವಾರ ನಗರದ ಸ್ವಾತಂತ್ರ ಉದ್ಯಾನದಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಪೋಷಕರ ಜಾಗೃತಿ ವೇದಿಕೆ ಹಾಗೂ ರಿಪಬ್ಲಿಕ್ ಸೇನೆ ಕಾರ್ಯಕರ್ತರು, 2015ನೆ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ಎಲ್ಲ್ಲ ಶಾಲೆಗಳ ಪ್ರವೇಶದ ಮುಂಭಾಗದಲ್ಲಿ ಶುಲ್ಕದ ವಿವರಗಳನ್ನು ಪ್ರಕಟಿಸಬೇಕೆಂದು ಸೂಚಿಸಿದೆ. ಆದರೆ, ಯಾವುದೇ ಶಾಲೆಯಲ್ಲಿ ಇದು ಜಾರಿಯಾಗಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತ ಕಾಪಾಡಬೇಕಾದ ಶಾಲಾ ಆಡಳಿತ ಮಂಡಳಿಗಳು, ಬಡ ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದ ಅವರು, ಎಲ್ಲ್ಲ ಶಾಲೆಯ ವಿದ್ಯಾರ್ಥಿಗಳಿಗೂ ಇಲಾಖೆ ಅನುಮತಿ ನೀಡಿದ ಪಠ್ಯಕ್ರಮದಂತೆ ಮಾತ್ರ ಪಠ್ಯಪುಸ್ತಕಗಳನ್ನು ಸರಕಾರವೇ ನೇರವಾಗಿ ಏಕ ಗವಾಕ್ಷಿ ಮೂಲಕ ವಿತರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಿಪಬ್ಲಿಕ್ ಸೇನೆ ಅಧ್ಯಕ್ಷ ಜಿಗಣಿ ಶಂಕರ್, ವೇದಿಕೆ ಉಪಾಧ್ಯಕ್ಷ ಅಣ್ಣೇಗೌಡ, ಮುಖಂಡರಾದ ಸರಸ್ಪತಿ, ಸುಮಿತ್ರಾ, ನಂಜಪ್ಪ ಸೇರಿ ಪ್ರಮುಖರಿದ್ದರು.





