ಕಾನೂನು ಸುವ್ಯವಸ್ಥೆ ಕುರಿತು ಡಿಜಿ ಪರಾಮರ್ಶೆ
ಬೆಂಗಳೂರು, ಆ.17: ನಗರ ವ್ಯಾಪ್ತಿ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ನಡೆಸುತ್ತಿರುವ ಗಸ್ತು ವ್ಯವಸ್ಥೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಕರೆದು ಪರಾಮರ್ಶೆ ನಡೆಸಿದರು.
ಗುರುವಾರ ಬೆಂ.ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ, ಸೀಮಂತ್ ಕುಮಾರ್ ಸಿಂಗ್, ಸತೀಶ್ ಕುಮಾರ್ ಸೇರಿ ನಗರ ವ್ಯಾಪ್ತಿಯ ಎಲ್ಲ ಡಿಸಿಪಿಗಳೊಂದಿಗೆ ಸಭೆ ನಡೆಸಿ, ನಗರದಲ್ಲಿನ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಡಿಜಿ ಸೂಚಿಸಿದರು.
ಸಭೆಯಲ್ಲಿ ನಗರದಲ್ಲಿ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವುದರಿಂದ ಕಳ್ಳತನ, ಸುಲಿಗೆ, ಸರ ಅಪಹರಣ ಇನ್ನಿತರ ಅಪರಾಧ ಕೃತ್ಯಗಳನ್ನು ಹತ್ತಿಕ್ಕಬಹುದು. ಅಲ್ಲದೆ, ರೌಡಿ ಚಟುವಟಿಕೆಗಳು, ಪುಂಡರ ಹಾವಳಿಗಳನ್ನು ತಡೆಯಬಹುದು ಎಂದು ಹೇಳಿದರು.
ಡಿಸಿಪಿಗಳಿಂದ ವಲಯವಾರು ಅಪರಾಧ ಪ್ರಕರಣಗಳ ಮಾಹಿತಿ ಪಡೆದ ಡಿಜಿಪಿ, ಗಸ್ತು ವ್ಯವಸ್ಥೆಯನ್ನು ಬಲಗೊಳಿಸಿ ನಮ್ಮ 100 ದೂರವಾಣಿಗೆ ಬರುವ ಕರೆಗಳ ಸ್ಥಳಕ್ಕೆ ತುರ್ತು ತೆರಳುವಂತೆ ಸೂಚಿಸಿದರು. ಚುನಾವಣೆಗಳು ಸಮೀಪಿಸುತ್ತಿರುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಲಹೆ ನೀಡಿದರು.







