ಕಾರಿನಲ್ಲಿ ವ್ಯವಸ್ಥಾಪಕನ ಶವ ಪತ್ತೆ ಪ್ರಕರಣ: ಹಣಕ್ಕಾಗಿ ಕೊಲೆ ಆರೋಪ
ಬೆಂಗಳೂರು, ಆ.17: ಕಂಠೀರವ ಸ್ಟುಡಿಯೊ ಬಳಿ ಕಾರಿನಲ್ಲಿ ಸುಧಾ ಸಹಕಾರ ಸೊಸೈಟಿಯ ವ್ಯವಸ್ಥಾಪಕ ಮುನಿಯಪ್ಪ ಮೃತದೇಹ ಪತ್ತೆ ಪ್ರಕರಣ ಸಂಬಂಧ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಅವರ ಪತ್ನಿ ಮಮತಾ ಗಂಭೀರ ಆರೋಪ ಮಾಡಿದ್ದಾರೆ.
ಪತಿ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹಣಕಾಸಿನ ವಿಚಾರವಾಗಿ ಹೇರೊಹಳ್ಳಿ ವಾರ್ಡ್‌ನ ಮಾಜಿ ಬಿಬಿಎಂಪಿ ಸದಸ್ಯ ಹನುಮಂತೇಗೌಡ, ಕಿಶೋರ್, ಕೃಷ್ಣಪ್ಪ, ಮೋಹನ್ ಎಂಬುವರು ಕೊಲೆಗೈದಿರುವುದಾಗಿ ಆರೋಪಿಸಿ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಮಮತಾ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಪತಿ ಮುನಿಯಪ್ಪ, ಸುಧಾ ಸಹಕಾರ ಸೊಸೈಟಿಯ ಅಮೃತಹಳ್ಳಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದರು.ಆದರೆ, ಹಣದ ವಿಚಾರವಾಗಿ ಹನುಮಂತೇಗೌಡ, ಕಿಶೋರ್, ಕೃಷ್ಣಪ್ಪ, ಮೋಹನ್ ಎಂಬುವರು ಕೊಲೆಗೈದು, ಆತ್ಮಹತ್ಯೆ ಎನ್ನುವಂತೆ ಬಿಂಬಿಸಲು ಮುಂದಾಗಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ಮಮತಾ ಕೋರಿದ್ದಾರೆ.
ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಶಿವನಹಳ್ಳಿ ಮೇಲ್ಸೇತುವೆಯಲ್ಲಿ ನಿಂತಿದ್ದ ಕಾರಿನ ಹಿಂಭಾಗದ ಸೀಟಿನಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಬಿದ್ದಿರುವುದನ್ನು ಕಂಡ ದಾರಿಹೋಕರು, ನಿಯಂತ್ರಣ ಕೊಠಡಿಗೆ ಕರೆ ಮಾಡಿ, ವಿಷಯ ಮುಟ್ಟಿಸಿದ್ದರು. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಮುನಿಯಪ್ಪ ಅವರ ಮೊಬೈಲ್‌ನಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು.
ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಕೊಲೆ(302) ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







