ಕಾನೂನು ರೀತಿಯಲ್ಲಿಯೇ ರಾಷ್ಟ್ರೀಯ ನಾಟಕ ಶಾಲೆ ತೆರವು: ಅನುಪಮ್ ಅಗರ್‌ವಾಲ್
ಬೆಂಗಳೂರು, ಆ.17: ಅವಧಿ ಮುಗಿದಿದ್ದರೂ ಗುರುನಾನಕ್ ಭವನವನ್ನು ತೆರವುಗೊಳಿಸದ ರಾಷ್ಟ್ರೀಯ ನಾಟಕ ಶಾಲೆಯನ್ನು ಕಾನೂನು ರೀತಿಯಲ್ಲಿಯೇ ತೆರವುಗೊಳಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್‌ವಾಲ್ ಸಮರ್ಥಿಸಿದ್ದಾರೆ.
ಗುರುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೋಟಿಸ್ ನೀಡದೆ ರಾಷ್ಟ್ರೀಯ ನಾಟಕ ಶಾಲೆಯ ಪರಿಕರಗಳನ್ನು ಬೀದಿಗೆ ಎಸೆಯಲಾಗಿದೆ ಎಂಬ ಆರೋಪ ಸುಳ್ಳಿನಿಂದ ಕೂಡಿದೆ. ತೆರವು ಕಾರ್ಯಾಚರಣೆಗೂ ಮೊದಲು ಹಲವು ಬಾರಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಸರಕಾರದ ಆದೇಶದ ಅನ್ವಯ 2007ರಲ್ಲಿ ಕ್ರೀಡಾ ಇಲಾಖೆಯ ಒಡೆತನದ ಗುರುನಾನಕ್ ಭವನವನ್ನು ರಾಷ್ಟ್ರೀಯ ನಾಟಕ ಶಾಲೆಗೆ ಮೂರು ವರ್ಷಕ್ಕೆ ಅಥವಾ ತನ್ನ ಸ್ವಂತ ಕಟ್ಟಡವನ್ನು ಹೊಂದುವವರೆಗೆ ಬಾಡಿಗೆಗೆ ನೀಡಲು ಸೂಚಿಸಲಾಗಿತ್ತು. ಪ್ರಸ್ತುತ ರಾಷ್ಟ್ರೀಯ ನಾಟಕ ಶಾಲೆ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ 3ಎಕರೆ ವಿಸ್ತೀರ್ಣದ ನಿವೇಶನದಲ್ಲಿ ತನ್ನ ಸ್ವಂತ ಕಟ್ಟಡ ಹೊಂದಿ ಕಾರ್ಯನಿರ್ವಹಿಸುತ್ತಿದೆ. ಆದರೂ ರಾಷ್ಟ್ರೀಯ ನಾಟಕ ಶಾಲೆಯ ಅಧಿಕಾರಿಗಳು ಗುರುನಾನಕ್ ಭವನವನ್ನು ಯುವಜನ ಕ್ರೀಡಾ ಇಲಾಖೆಗೆ ಹಸ್ತಾಂತರಿಸದೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕೇಂದ್ರವು ನಿಯಮಾನುಸಾರ ಕಳೆದ ಮೂರು ವರ್ಷದಿಂದ 20,45,350ರೂ.ನಷ್ಟು ಬಾಡಿಗೆ ಕಟ್ಟಿಲ್ಲ. ಈ ಬಗ್ಗೆ ಹಲವಾರು ಸೂಚನಾ ಪತ್ರಗಳನ್ನು ಕಳುಹಿಸಲಾಗಿದ್ದರೂ ಬಾಡಿಗೆ ಮೊತ್ತವನ್ನು ಪಾವತಿಸದೇ ಸರಕಾರಿ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಅನುಪಮ್ ಅಗರ್‌ವಾಲ್ ತಿಳಿಸಿದರು.
ರಾಷ್ಟ್ರೀಯ ನಾಟಕ ಶಾಲೆಯನ್ನು ನಿಯಮದ ಅನುಸಾರವಾಗಿ ತೆರವುಗೊಳಿಸುವಂತೆ ಹಲವು ಬಾರಿ ಪತ್ರ ಬರೆಯಲಾಗಿದೆ. ಕಳೆದ ಮೇ 5ರಂದು ನೋಟಿಸ್ ನೀಡಿ, 30ದಿನಗಳೊಳಗೆ ಗುರುನಾನಕ್ ಭವನವನ್ನು ತೆರುವುಗೊಳಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು. ಇದಕ್ಕೂ ರಾಷ್ಟ್ರೀಯ ನಾಟಕ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಚನಾ ಪತ್ರಗಳಿಗೆ ರಾಷ್ಟ್ರೀಯ ನಾಟಕ ಶಾಲೆಯಿಂದ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ ಆ.16ರಂದು ಬೆಳಗ್ಗೆ ಗುರುನಾನಕ್ ಭವನವನ್ನು ವಶಕ್ಕೆ ಪಡೆಯಲು ಪ್ರಕ್ರಿಯೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ನಾಟಕ ಶಾಲೆಯ ನಿರ್ದೇಶಕರಾಗಲಿ, ವಿದ್ಯಾರ್ಥಿಗಳಾಗಲಿ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಭವನದ ಒಳಗಿದ್ದ ರಾಷ್ಟ್ರೀಯ ನಾಟಕ ಶಾಲೆಯ ಸಾಮಗ್ರಿಗಳನ್ನು ಪಟ್ಟಿ ಮಾಡಿ, ಮಹಜರ್ ಮಾಡಿ ತೆರವುಗೊಳಿಸಲಾಯಿತು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ನಾಟಕ ಶಾಲೆಯ ಅಧಿಕಾರಿಗಳು ಅನಧಿಕೃತವಾಗಿ ಗುರುನಾನಕ್ ಭವನವನ್ನು ಇತರೆ ಸಂಸ್ಥೆಗಳಿಗೆ ಬಾಡಿಗೆಗೆ ನೀಡಿದ್ದರು. ಭವನದ ಒಳಗೆ ಅನಧಿಕೃತವಾದ ವ್ಯಕ್ತಿಗಳು ವಾಸ ಮಾಡುವ ಮೂಲಕ ಕಟ್ಟಡವನ್ನು ಹಾಳು ಗೆಡವಲಾಗಿತ್ತು. ಹೀಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ತನ್ನ ಕಾರ್ಯಕ್ರಮಗಳನ್ನು ನಡೆಸಲು ಜಾಗದ ಕೊರತೆ ಇದ್ದ ಕಾರಣ ಗುರುನಾನಕ್ ಭವನವನ್ನು ವಶಕ್ಕೆ ಪಡೆಯಲು ಅನಿವಾರ್ಯವಾಗಿತ್ತು.-ಅನುಪಮ್ ಅಗರ್‌ವಾಲ್ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ
ರಾಷ್ಟ್ರೀಯ ನಾಟಕ ಶಾಲೆಯ ಪರಿಕರಗಳು ಬೀದಿಗೆ ಕಲಾ ಕ್ಷೇತ್ರಕ್ಕೆ ಮಾಡಿದ ಅಪಮಾನ: ಬಸವಲಿಂಗಯ್ಯ
ನಗರದ ಗುರುನಾನಕ್ ಭವನವನ್ನು ಬಾಡಿಗೆಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಯ ನಾಟಕ ಶಾಲೆಯ ಪರಿಕರಗಳನ್ನು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಬೀದಿಗೆ ಎಸೆಯುವ ಮೂಲಕ ಕಲಾಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಬಸವಲಿಂಗಯ್ಯ ಆರೋಪಿಸಿದ್ದಾರೆ.
ಗುರುವಾರ ಗುರುನಾನಕ್ ಭವನದಲ್ಲಿದ್ದ ರಾಷ್ಟ್ರೀಯ ನಾಟಕ ಶಾಲೆಯನ್ನು ಪರಿಕರಗಳನ್ನು ಬೀದಿಗೆ ಎಸೆದ ಕ್ರೀಡಾ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಕರ್ಮಿಗಳು ನಡೆಸಿದ ಧರಣಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಇಲಾಖೆಯ ಅಧಿಕಾರಿಗಳು ಕಲಾ ಕ್ಷೇತ್ರಕ್ಕೆ ಮಾಡಿದ ಅಪಮಾನಕ್ಕೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಹಲವು ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹದ ಫಲವಾಗಿ ರಾಷ್ಟ್ರಿಯ ನಾಟಕ ಶಾಲೆಯ ಒಂದು ವಿಭಾಗವು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಭಾರತಕ್ಕೆ ಇರುವ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರಿನಲ್ಲಿರುವುದು ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಆದರೆ, ಯುವ ಕ್ರೀಡಾ ಇಲಾಖೆ ಅಧಿಕಾರಿಗಳು ಬಾಡಿಗೆ ನೀಡದ ನೆಪದಲ್ಲಿ ಶಾಲೆಗೆ ಸೇರಿದ ಪರಿಕರಗಳನ್ನು ಬೀದಿಗೆ ಎಸೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುರುನಾನಕ್ ಭವನಕ್ಕೆ ಬಾಡಿಗೆ ಕಟ್ಟಿಲ್ಲವೆಂದು ಕ್ರೀಡಾ ಇಲಾಖೆ ಆರೋಪಿಸುತ್ತಿದೆ. ಆದರೆ, ಇದು ಬಾಡಿಗೆಯ ಪ್ರಶ್ನೆಯಲ್ಲ. ಗುರುನಾನಕ್ ಭವನವನ್ನು 30ವರ್ಷಕ್ಕೆ ಗುತ್ತಿಗೆಗೆ ಪಡೆಯಲು ಚಿಂತನೆ ನಡೆಸಿದ್ದೆವು. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯ ಕಚೇರಿಯಲ್ಲಿ ಅನುಮತಿ ಹಾಗೂ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಒಪ್ಪಿಗೆಯೂ ಸೂಚಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ರಾಷ್ಟ್ರೀಯ ನಾಟಕ ಶಾಲೆಯನ್ನು ತೆರವುಗೊಳಿಸಿದ್ದು ಅನುಮಾನ ಮೂಡಿಸಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ರಾಷ್ಟ್ರೀಯ ನಾಟಕ ಶಾಲೆಗೆ ಸಂಬಂಧಿಸಿದ ಕಟ್ಟಡ ಬೆಂಗಳೂರು ವಿಶ್ವವಿದ್ಯಾಲಯದ ಸಮೀಪವಿರುವ ಕಲಾಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ. ಆದರೆ, ಅಲ್ಲಿ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರ ನಡೆಸುವುದು ಹಾಗೂ ಗುರುನಾನಕ್ ಭವನದಲ್ಲಿ ನಾಟಕ ಪ್ರದರ್ಶನಕ್ಕೆ ಮೀಸಲಿರಿಸುವುದರ ಮೂಲಕ ಜನತೆಯನ್ನು ನಾಟಕ್ಕೆ ಕ್ಷೇತ್ರಕ್ಕೆ ಆಕರ್ಷಿಸುವ ಉದ್ದೇಶವಾಗಿತ್ತೆಂದು ಅವರು ತಿಳಿಸಿದರು.
ಗುರುನಾನಕ್ ಭವನವನ್ನು ರಾಷ್ಟ್ರೀಯ ನಾಟಕ ಶಾಲೆಗಾಗಿ 30ವರ್ಷಕ್ಕೆ ಗುತ್ತಿಗೆ ಪಡೆಯುವುದರಿಂದ ಯಾರಿಗೂ ವೈಯಕ್ತಿಕ ಲಾಭವಿಲ್ಲ. ನಾಟಕ ಕ್ಷೇತ್ರವನ್ನು ಮತ್ತಷ್ಟು ಸೃಜನಾತ್ಮಕವಾಗಿ ಕಟ್ಟಲು ನಗರದ ಕೇಂದ್ರ ಭಾಗದಲ್ಲೊಂದು ಸ್ಥಳಾವಕಾಶವಿದ್ದರೆ ಉತ್ತಮವೆಂಬ ಕಾರಣಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ, ನಾಟಕ ಕ್ಷೇತ್ರದ ಕುರಿತು ಹೆಚ್ಚಿನ ಆಸಕ್ತಿ ಇಲ್ಲದ ಅಧಿಕಾರಿಗಳು ರಾಷ್ಟ್ರೀಯ ನಾಟಕ ಶಾಲೆಯನ್ನು ತೆರವುಗೊಳಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಅವರು ವಿಷಾದಿಸಿದರು.
ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ದಪ್ಪ ಮಾತನಾಡಿ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಸ್ಥಾಪನೆಗೊಂಡಿರುವುದೇ ನಮ್ಮ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಅಗತ್ಯವಿರುವ ಪ್ರೋತ್ಸಾಹ-ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿತ್ತು. ಅದನ್ನು ರಾಜ್ಯ ಸರಕಾರಗಳು ಮಾಡಿಕೊಳ್ಳುತ್ತಾ ಬಂದಿವೆ. ಆದರೆ, ಅಧಿಕಾರಿಗಳ ಬೇಜಾಬ್ದಾರಿತನದಿಂದಾಗಿ ರಾಷ್ಟ್ರೀಯ ನಾಟಕ ಶಾಲೆಗೆ ಅಪಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿಯಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಯುವ ನಿರ್ದೇಶಕ ತಾಯಿ ಲೋಕೇಶ್ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಶಿಬಿರಾರ್ಥಿಗಳು ಸೇರಿದಂತೆ ಹಲವು ಮಂದಿ ರಂಗಕರ್ಮಿಗಳು ಉಪಸ್ಥಿತರಿದ್ದರು.







