ಭೂಸ್ವಾಧೀನ ಕಾಯಿದೆ ಅನುಸಾರ ಪರಿಹಾರ ನೀಡಲು ಬಿಡಿಎಗೆ ಹೈಕೋರ್ಟ್ ಆದೇಶ
ನೋಟಿಫಿಕೇಷನ್ ಹೊರಡಿಸದೆ ಜಮೀನು ಸ್ವಾಧೀನ ಪ್ರಕರಣ

ಬೆಂಗಳೂರು, ಆ.17: ಹೊಲಗೇರಹಳ್ಳಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಯಾವುದೇ ನೋಟಿಫಿಕೇಶನ್ ಹೊರಡಿಸದೆ ಎರಡು ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ವಾಪಸ್ ಜಮೀನು ನೀಡಬೇಕು ಇಲ್ಲವೇ ಪರಿಹಾರ ನೀಡಬೇಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಮಂಜುನಾಥ್ ಹಾಗೂ ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ವಿ.ಆರ್.ಸಾರಥಿ ಅವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ನಿಯಮಗಳನ್ನು ಉಲ್ಲಂಘಿಸಿ 1989ರಲ್ಲಿ ಬಿಡಿಎನವರು ಯಾವುದೇ ನೋಟಿಫಿಕೇಷನ್ ಹೊರಡಿಸದೆ ಹೊಲಗೇರಹಳ್ಳಿಯಲ್ಲಿ ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕೆ ಎರಡು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ನೋಟಿಫಿಕೇಷನ್ ಹೊರಡಿಸದೇ ಜಮೀನನ್ನು ವಶಪಡಿಸಿಕೊಂಡಿದ್ದರಿಂದ ಅರ್ಜಿದಾರರಿಗೆ ಅನ್ಯಾಯವಾಗಿದೆ. ಹಾಗೂ 1989ರಿಂದ ಇಲ್ಲಿಯವರೆಗೆ ಸಮಯ ವ್ಯರ್ಥವಾಗಿದೆ ಎಂದು ಪೀಠಕ್ಕೆ ತಿಳಿಸಿದರು.







