ಭಟ್ಕಳ: ನವಾಯತ್ ಕಾಲನಿಯಲ್ಲಿ ಕಳವು

ಭಟ್ಕಳ, ಆ. 17: ಭಟ್ಕಳದಲ್ಲಿ ಮನೆಕಳವು ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಕಳ್ಳರು ಮನೆಯಲ್ಲಿದ್ದ ವಸ್ತು, ಹಣ, ಒಡವೆಗಳನ್ನು ದೋಚುತ್ತಿದ್ದಾರೆ.
ಗುರುವಾರ ಇಂತಹದ್ದೆ ಮನೆಕಳುವು ಘಟನೆ ಮರುಕಳಿಸಿದ್ದು ಈ ಬಾರಿ ಕಳ್ಳರಿಗೆ ಮನೆಯಿಂದ ಚಿನ್ನಾಭರಣಗಳಾಗಲಿ, ಹಣವಾಗಲಿ ದೊರೆಯದೆ ಇರುವುದರಿಂದ ಕೇವಲ ಬಟ್ಟೆಬರೆಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದಾರೆ.
ನವಾಯತ್ ಕಾಲನಿ ವ್ಯಾಪ್ತಿಯ ಮೂಸಾ ನಗರ ಬಳಿಯ ಅಮೀನುದ್ದೀನ್ ರಸ್ತೆಯಲ್ಲಿರುವ ಮೊಹತೆಶಮ್ ಮುಖ್ತಾರ್ ರಿಗೆ ಸೇರಿದ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿದ್ದಾಗಿ ತಿಳಿದುಬಂದಿದೆ. ಈ ಮನೆಯ ಮಾಲಕರು ಗಲ್ಫ್ ನಲ್ಲಿ ವಾಸಿಸುತ್ತಿದ್ದು ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ. ಮನೆಯನ್ನು ನೋಡಿಕೊಳ್ಳಲು ವ್ಯಕ್ತಿಯೊಬ್ಬರು ಎರಡು-ಮೂರು ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದ್ದು ಗುರುವಾರ ಬೆಳಗ್ಗೆ ಎಂದಿನಂತೆ ಮನೆಗೆ ಬಂದಾಗ ಮನೆ ಕಳವು ಆಗಿರುವುದು ಗಮನಕ್ಕೆ ಬಂದಿದೆ.
ಮನೆಯಲ್ಲಿ ಹಣ, ಚಿನ್ನಾಭರಣೆ ಯಾವುದು ಇಲ್ಲದೆ ಇರುವುದರಿಂದಾಗಿ ಕಳ್ಳರು ಕೇವಲ ಬಟ್ಟೆ ಬರೆಗಳನಷ್ಟೇ ಕಳುವುಗೈದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳುವುಗೈದಿದ್ದರು ಎಂದು ತಿಳಿದುಬಂದಿದೆ.





