ಸೆಲೆಬ್ರಿಟಿ ಲಗೋರಿ ಪ್ರೀಮಿಯರ್ ಲೀಗ್ಗೆ ‘ಟೀಮ್ ಬಿರುವೆರ್ ಕುಡ್ಲ’ ಸಿದ್ಧತೆ
ಮಂಗಳೂರು, ಆ.18: ಬೆಂಗಳೂರಿನ ರಾಜೀವ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆ. 20ರಂದು ನಡೆಲಿರುವ ಸೆಲೆಬ್ರಿಟಿ ಲಗೋರಿ ಪ್ರೀಮಿಯರ್ ಲೀಗ್ 2017ರಲ್ಲಿ ತುಳು ಚಿತ್ರರಂಗದ ಮೂರು ತಂಡಗಳಲ್ಲಿ ಒಂದಾಗಿರುವ ‘ಟೀಮ್ ಬಿರುವೆರ್ ಕುಡ್ಲ’ ಸ್ಪರ್ಧೆಗೆ ಸಿದ್ಧಗೊಂಡಿದೆ ಎಂದು ತಂಡದ ನಾಯಕ ಪ್ರಕಾಶ್ ಧರ್ಮನಗರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ ಮತ್ತು ಕೋಸ್ಟಲ್ ವುಡ್ ತಾರೆಯರು ಹಾಗೂ ಸೆಲೆಬ್ರಿಟಿಗಳ ನಡುವೆ ಲಗೋರಿ ಪಂದ್ಯಾಟ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ ಎಂದರು.
ಕನ್ನಡ ಚಿತ್ರರಂಗದ 9 ತಂಡಗಳು ಹಾಗೂ ತುಳು ಚಿತ್ರರಂಗದ ಮೂರು ತಂಡಗಳು ಈ ಪ್ರೀಮಿಯರ್ ಲೀಗ್ನಲ್ಲಿ ಸೆಣಸಾಡಲಿವೆ. ಟೀಮ್ ಬಿರುವೆರ್ ಕುಡ್ಲ ತಂಡದಲ್ಲಿ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಪ್ರಥ್ವಿ ಅಂಬಾರ್, ತುಳು ಚಿತ್ರದ ಪ್ರಥಮ ಮಹಿಳಾ ನಿರ್ದೇಶಕಿ ಖ್ಯಾತಿಯ ಅಶ್ವಿನಿ ಕೋಟ್ಯಾನ್, ಲೇಡಿ ಟೈಗರ್ ಸುಷ್ಮಾರಾಜ್, ಬರ್ಕೆ ಚಿತ್ರದ ನಾಯಕ ನಟ ಅಶ್ವಿನ್ ಶೆಟ್ಟಿಯವರಿದ್ದು, ಈಗಾಗಲೇ ಪಂದ್ಯಾಟಕ್ಕೆ ಸಾಕಷ್ಟು ತಯಾರಿ ಹಾಗೂ ತರಬೇತಿ ನಡೆಸಲಾಗಿದೆ ಎಂದವರು ಹೇಳಿದರು.
ತಂಡದ ತರಬೇತುದಾರರಾಗಿ ಪವನ್ ಬರ್ಕೆ ಹಾಗೂ ಸಹಾಯಕ ತರಬೇತುದಾರರಾಗಿ ಪ್ರತೀಕ್ ಬರ್ಕೆ, ತಂಡದ ಮ್ಯಾನೇಜರ್ ಆಗಿ ವಿನೀತ್ ಕೋಟ್ಯಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಲ್ಲಿ ಆಡಿದ ರೀತಿಯಲ್ಲಿಯೇ ಈ ಲಗೋರಿ ಪಂದ್ಯಾಟ ನಡೆಯಲಿದೆ ಎಂಬ ಭಾವನೆ ಇತ್ತು. ಆದರೆ ವಾಸ್ತವದಲ್ಲಿ ಪ್ರಸಕ್ತ ಪಂದ್ಯಾಟದಲ್ಲಿ ಹಲವಾರು ನಿಯಮಗಳನ್ನು ರೂಪಿಸಲಾಗಿದೆ. ಹಾಗಾಗಿ ಇದೊಂದು ಕುತೂಹಲಕಾರಿ ಹಾಗೂ ಆಕರ್ಷಣೀಯ ಪಂದ್ಯವಾಗಿ ಮೂಡಿಬರಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಂಡದ ಸಹ ಮಾಲಕ ರಾಕೇಶ್ ಪೂಜಾರಿ, ಉಪನಾಯಕ ಅಶ್ವಿನ್ ಶೆಟ್ಟಿ, ಅಶ್ವಿನಿ ಕೋಟ್ಯಾನ್, ಸುನಿಲ್ ಅಶೋಕ್ ನಗರ, ವಿಜೆ ವನೀತ್ ಉಪಸ್ಥಿತರಿದ್ದರು.