ದಾಖಲೆಗಳಿಲ್ಲದೆ ಗೋವುಗಳ ಸಾಗಾಟ, ಪೊಲೀಸ್ ಮುಟ್ಟುಗೋಲು

ಸಿದ್ದಾಪುರ, ಆ.18: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಗೋವುಗಳನ್ನು ಸಿದ್ದಾಪುರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ವೇಳೆ ದಾಳಿ ನಡೆಸಿದ ಪೊಲೀಸರು ನೆಲ್ಯಹುದಿಕೇರಿಯಲ್ಲಿ ಹಸುಗಳನ್ನು ಮುಟ್ಟುಗೋಲು ಹಾಕಿರುವ ಘಟನೆ ನಡೆದಿದ್ದು, ಆರೋಪಿಗಳು ವಾಹನ ಸಮೇತ ಪರಾರಿಯಾಗಿದ್ದಾರೆ. ಈ ಸಂದರ್ಭ ಸಂಘಪರಿವಾರ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಬಳಿಕ ವಶಪಡಿಸಿ ಕೊಂಡ ಗೋವುಗಳನ್ನು ಮೈಸೂರಿನ ಪಿಂಜರ್ ಪೋಲ್‍ಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಡಿವೈಎಸ್‍ಪಿ ಸುಂದರ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಪತ್ರಕರ್ತರ ಮೇಲೆ ಹಲ್ಲೆ: ಪೊಲೀಸರ ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಸುದ್ದಿ ಮಾಡಲು ತೆರಳಿದ ಸಿದ್ದಾಪುರ ವರದಿಗಾರ ಸುಬ್ರಮಣಿ ಮತ್ತು ಸತೀಶ್ ಮೇಲೆ ನೆಲ್ಯಹುದಿಕೇರಿ ನಿವಾಸಿ ಮಹಮ್ಮದ್ ಆಲಿ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ಮಹಮ್ಮದ್ ಸುಬ್ರಮಣಿ ವಿರುದ್ದ ಪ್ರತಿ ದೂರು ನೀಡಿದ್ದು ಪ್ರಕರಣ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ರಾಜಿ ಸಂದಾನದ ಮೂಲಕ ಬಗೆಹರಿಸಲಾಯಿತು.
ಖಂಡನೆ: ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಸುಬ್ರಮಣಿ ಹಾಗೂ ಸಿದ್ದಾಪುರ ನಗರ ಪತ್ರಕರ್ತರ ಸಂಘದ ನಿರ್ದೇಶಕ ಸತೀಶ್ ಅವರ ಮೇಲಿನ ಹಲ್ಲೆಗೆ ಸಿದ್ದಾಪುರ ನಗರ ಪತ್ರಕರ್ತರ ಸಂಘ ಖಂಡನೆ ವ್ಯಕ್ತಪಡಿಸಿದೆ.







