‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮ ಉದ್ಘಾಟನೆ

ಬಾಗೇಪಲ್ಲಿ,ಆ.18: ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾವಯವ ಕೃಷಿ ಪದ್ದತಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಪಂಕಜಾರೆಡ್ಡಿ ರೈತರಿಗೆ ಕರೆ ನೀಡಿದರು.
ತಾಲ್ಲೂಕಿನ ಗೂಳೂರು ಗ್ರಾಮದ ರೈತ ಸಂರ್ಪಕ ಕೇಂದ್ರ ಗೋಧಾಮಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಗ್ರ ಕೃಷಿ ಅಭಿಯಾನದ ಹೋಬಳಿ ಮಟ್ಟದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ಬೆಳೆದಂತಲ್ಲೇ ಹಿಂದಿನ ಸಾವಯವ ಕೃಷಿ ಪದ್ದತಿ ಮರೆಯಾಗುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ ಅವರು ನಾವು ಉತ್ತಮ ಆರೋಗ್ಯದಿಂದ ಇರಲು ಕ್ರಿಮಿನಾಶಕ ಬೆಳೆಗಳಗಿಂತ ಸಾವಯವ ಕೃಷಿ ಬೆಳೆಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಯಬೇಕಾಗಿದೆ. ಸರ್ಕಾರ ಈ ಕಾರ್ಯಕ್ರಮವನ್ನು ಕಾಲಕಾಲಕ್ಕೆ ಆಯೋಜಿಸುತ್ತಿರುವುದರಿಂದ ರೈತರು ಇಂತಹ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ, ಸರ್ಕಾರಿ ಸೌಲಭ್ಯಗಳಿಗಾಗಿ ಮಾಹಿತಿ ಪಡೆಯಲು ರೈತರು ಕಚೇರಿಗಳ ಸುತ್ತಾ ಈ ಹಿಂದೆ ನೂರಾರು ರೂ.ಗಳ ಹಣ ಖರ್ಚು ಮಾಡಿಕೊಂಡು ತಿರುಗಾಡುತ್ತಿದ್ದರು ಆದರೆ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಮಾಹಿತಿ ನೀಡಲು ಬರುತ್ತಿರುವುದರಿಂದ ಈ ಸೌಲತ್ತುಗಳ ಸಮಗ್ರ ಮಾಹಿತಿಯನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.
ರೈತರು ಹೆಚ್ಚಾಗಿ ನೀರನ್ನು ವ್ಯರ್ಥ ಮಾಡದೆ ಬೆಳೆಗೆ ಸಾಕಾಗುವಷ್ಟು ನೀರನ್ನು ಮಾತ್ರ ಬಳಸಿಕೊಂಡು ಬೆಳೆಗಳನ್ನು ಬೆಳೆಯಬೇಕು, ನೀರನ್ನು ಹೆಚ್ಚಾಗಿ ವ್ಯರ್ಥ ಮಾಡುವುದರಿಂದ ಮುಂದಿನ ದಿನಗಳಲ್ಲಿ ಜಠಿಲ ಸಮಸ್ಯೆ ಎದುರಿಸಬೇಕಾಗುವಂತಹ ಪರಿಸ್ಥಿತಿ ಉದ್ಭವಾಗುತ್ತೆ ಎಂದ ಅವರು ಸರ್ಕಾರ ವಿವಿಧ ಸೌಲಭ್ಯಗಳ ಜೊತೆಗೆ ಸಹಾಯ ಧನ, ಪ್ರೋತ್ಸಾಹ ಧನ ನೀಡುತ್ತಯಿರುವುದರಿಂದ ರೈತರು ನಿಗಧಿತ ಸಮಯಕ್ಕೆ ಅರ್ಜಿ ಹಾಕಿಕೊಂಡು ಸೌಲಭ್ಯಗಳನ್ನು ಪಡೆಯಬೇಕೆಂದರು. ರೈತರು ಸಿರಿ ದಾನ್ಯಗಳನ್ನು ಬೆಳೆಯುವಂತೆ ಪ್ರೇರೇಪಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮುನ್ನಾಖಾನ್, ತಾ.ಪಂ ಸದಸ್ಯ ಈಶ್ವರಮ್ಮ ವೀರನಾರಾಯಣ, ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಡಿ.ಚಂದ್ರಶೇಖರಯ್ಯ, ರೇಷ್ಮೆ ಇಲಾಖೆಯ ಸಹಾಯ ನಿರ್ದೇಶಕ ಅಮರನಾಥ್, ತೋಟಗಾರಿಕೆ ಇಲಾಖೆಯ ಸಹಾಯ ಅಧಿಕಾರಿ ಶ್ರೀನಿವಾಸ್, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಮಂಜುಳಾ, ಎಪಿಎಂಸಿ ಸದಸ್ಯರಾದ ನರಸಿಂಹಪ್ಪ, ರಾಮಚಂದ್ರರೆಡ್ಡಿ, ಸಹಾಯ ಕೃಷಿ ಅಧಿಕಾರಿಗಳಾದ ಶಶಿಧರ್, ಗಂಗಾಧರ್‍ರೆಡ್ಡಿ, ಕೆ.ಬಾಬು ಮತ್ತಿತರರು ಉಪಸ್ಥಿತರಿದ್ದರು.







