ಪಾಲೇಮಾಡಿನ ನಿವಾಸಿಗಳಿಗೆ ಸ್ಮಶಾನ ಜಾಗ ನೀಡಲು ಬಿಎಸ್‍ಪಿ ಒತ್ತಾಯ

ಮಡಿಕೇರಿ ಆ.18 :ಪಾಲೇಮಾಡಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣ ನಿರ್ಮಾಣಕ್ಕೆಂದು ಮಂಜೂರಾಗಿರುವ ಈ ಹಿಂದಿನ ಸ್ಮಶಾನದ ಜಾಗವನ್ನು ಸ್ಥಳೀಯ ನಿವಾಸಿಗಳಿಗೆ ಮರಳಿಸಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಬಿಎಸ್‍ಪಿ ಜಿಲ್ಲಾ ಕಾರ್ಯದರ್ಶಿ ಕೆ. ಮೊಣ್ಣಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅಧೀನ ಕಾರ್ಯದರ್ಶಿಗಳ ನಿರ್ದೇಶನದಂತೆ ಮುಂದಿನ 15 ದಿನಗಳ ಒಳಗಾಗಿ ಪಾಲೇಮಾಡಿನ 2 ಏಕರೆ ಸ್ಮಶಾನ ಜಾಗವನ್ನು, ಕ್ರಿಕೆಟ್ ಸಂಸ್ಥೆಗೆ ಸರ್ವೇ ನಂಬರ್ 167/1ಎ ಯಲ್ಲಿ ನೀಡಿರುವ 12.70 ಏಕರೆಯಿಂದ ಪ್ರತ್ಯೇಕಿಸಿ ದುರಸ್ತಿ ಪಡಿಸಿ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಎಸ್‍ಪಿ ಮತ್ತು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯೊಂದಿಗೆ ಪಾಲೆÉೀಮಾಡಿನ ‘ಸ್ಮಶಾನ’ ಜಾಗವನ್ನು ಮತ್ತೆ ಅಲ್ಲಿನ ನಿವಾಸಿಗಳಿಗೆ ನೀಡಬೇಕೆಂದು ಸಾಕಷ್ಟು ಹೋರಾಟಗಳನ್ನು ನಡೆಸಲಾಗಿದೆ. ಇದರ ಫಲವಾಗಿ ಅಧೀನ ಕಾರ್ಯದರ್ಶಿಗಳು ಇದೇ ಜುಲೈ 6 ರಂದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪತ್ರದಲ್ಲಿ, ‘ಕ್ರಿಕೆಟ್ ಸಂಸ್ಥೆಗೆ 12.70 ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡಲಾಗಿದ್ದು, ಆ ಪೈಕಿ 2 ಎಕರೆ ಜಮೀನನ್ನು ಈಗಾಗಲೆ ಪರಿಶಿಷ್ಟ ಜಾತಿ- ಪಂಗಡದವರಿಗೆ ಸ್ಮಶಾನದ ಉದ್ದೇಶಕ್ಕಾಗಿ ಕಾಯ್ದಿರಿಸಿರುವುದರಿಂದ, ಉಳಿಕೆ 10.70 ಎಕರೆ ಜಮೀನಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಸಾಧ್ಯತೆ ಬಗ್ಗೆ ಹಾಗೂ ಕ್ರಿಕೆಟ್ ಸಂಸ್ಥೆಗೆ ಆ 2 ಎಕರೆ ಜಮೀನು ಅಗತ್ಯವೆನಿಸಿದಲ್ಲಿ ಅದೇ ಸರ್ವೇ ನಂಬರ್‍ನಲ್ಲಿ ಅಥವಾ ಪಕ್ಕದ ಸರ್ವೇ ನಂಬರ್‍ನಲ್ಲಿ ಲಭ್ಯವಿರುವ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು’ ಎಂದು ತಿಳಿಸುವ ಮೂಲಕ ಕ್ರಿಕೆಟ್ ಸಂಸ್ಥೆಗೆ ಮಂಜೂರಾದ ಜಾಗದಲ್ಲಿನ ಸ್ಮಶಾನಕ್ಕೆ ಸೇರಿದ ಜಾಗವನ್ನು ಬಿಟ್ಟು ಬೇರೆಡೆ ಎರಡು ಎಕರೆ ಜಾಗವನ್ನು ಗುರುತಿಸಲು ಸೂಚಿಸಿರುವ ಬಗ್ಗೆ ತಿಳಿಸಿದರು.
ಅಶಾಂತಿ ಯತ್ನ
ಪಾಲೇಮಾಡು ನಿವಾಸಿಗಳು ಸಾಕಷ್ಟು ವರ್ಷಗಳಿಂದ ಬಳಸುತ್ತಿದ್ದ ಸ್ಮಶಾನ ಜಾಗವನ್ನು ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿದ ಸಂದರ್ಭ ಅದನ್ನು ಮರಳಿ ಪಡೆಯುವ ಪ್ರಯತ್ನಗಳನ್ನು ನಡೆಸಲಾಗಿದೆ. ಈ ಹಂತದಲ್ಲಿ ಆ ವಿಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ಮಡಿಕೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಅನಗತ್ಯವಾಗಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, ಪಾಲೇಮಾಡಿನಲ್ಲಿ ಅಶಾಂತಿ ಮುಡಿಸುವ ಪ್ರಯತ್ನ ನಡೆಸಿರುವುದಾಗಿ ಕೆ. ಮೊಣ್ಣಪ್ಪ ಆರೋಪಿಸಿದರು.
ಪಾಲೇಮಾಡು ವಿಭಾಗದ ನಿವಾಸಿಗಳಿಗೆ 94 ‘ಸಿ’ಯಡಿ ಹಕ್ಕು ಪತ್ರ ನೀಡುವ ಕಾರ್ಯ ಸೇರಿದಂತೆ ಕುಡಿಯುವ ನೀರು, ವಿದ್ಯುಚ್ಛಕ್ತಿ ಒದಗಿಸುವ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲವೆಂದು ಆರೋಪಿಸಿ, ಅಗತ್ಯ ಕ್ರಮ ಕೈಗೊಂಡು ಪಾಲೇಮಾಡು ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‍ಪಿ ಪ್ರಮುಖರಾದ ವೆಮಕಟೇಶ್ ಹೆಚ್., ಕೆ. ರಾಜು, ಹೆಚ್.ಜಿ. ಮಾದೇಶ್ ಹಾಗೂ ನಿಶ್ಚಿತ್ ಉಪಸ್ಥಿತರಿದ್ದರು.







