ದಿಲ್ಲಿ: ಮಹಿಳಾ ಉದ್ಯೋಗಿಗೆ ಭದ್ರತಾ ಅಧಿಕಾರಿಯಿಂದ ಪೀಡನೆ

ದಿಲ್ಲಿ, ಆ.18: ಹೋಟೆಲ್‌ನ ಭದ್ರತಾ ಅಧಿಕಾರಿ ತನ್ನನ್ನು ಪೀಡಿಸಿದ್ದಲ್ಲದೆ ತನ್ನ ಸೀರೆ ಎಳೆಯಲು ಪ್ರಯತ್ನಿಸಿದ್ದಾನೆ ಎಂದು ದಿಲ್ಲಿ ಏರೊಸಿಟಿಯ ಹೋಟೆಲ್ ಒಂದರ ಮಹಿಳಾ ಉದ್ಯೋಗಿಯೋರ್ವರು ಆರೋಪಿಸಿದ್ದಾರೆ.
ಹೋಟೆಲ್‌ನ ಸಿಸಿಟಿವಿ ಕೋಣೆಯಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಯ ಕುರಿತು ಹೋಟೆಲ್‌ನ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಲ್ಲಿ ದೂರು ನೀಡಿದ್ದು ಅವರು ಭದ್ರತಾ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತನ್ನನ್ನೇ ಉದ್ಯೋಗದಿಂದ ವಜಾಗೊಳಿಸಿದ್ದಾರೆ ಎಂದು 33ರ ಹರೆಯದ ಮಹಿಳೆ ದೂರಿದ್ದಾರೆ. ಪ್ರಕರಣ ನಡೆದ ಮೂರು ದಿನದ ಬಳಿಕ ಮಹಿಳೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೀಡನೆಯ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಶೀಘ್ರ ಬಂಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನೊಡನೆ ದೈಹಿಕ ಸಂಬಂಧ ಹೊಂದಬೇಕೆಂದು ಭದ್ರತಾ ಅಧಿಕಾರಿ ಕೆಲ ಸಮಯದಿಂದ ಒತ್ತಡ ಹಾಕುತ್ತಿದ್ದ . ಆದರೆ ತಾನು ನಿರಾಕರಿಸಿದ್ದೆ ಎಂದು ಮಹಿಳೆ ದೂರಿದ್ದಾಳೆ. ಇತ್ತೀಚೆಗೆ ತನ್ನ ಹುಟ್ಟುಹಬ್ಬದಂದು ಆ ಅಧಿಕಾರಿ ತನಗೆ ಉಡುಗೊರೆ ನೀಡುವುದಾಗಿ ಹೇಳಿದಾಗ ತಾನು ನಿರಾಕರಿಸಿದೆ. ಆಗ ಆತ ಇನ್ನೊಬ್ಬ ಪುರುಷ ಸಿಬ್ಬಂದಿಯ ಸಮ್ಮುಖದಲ್ಲಿ ತನ್ನ ಸೀರೆ ಹಿಡಿದೆಳೆದಿದ್ದಾನೆ ಎಂದು ವಿವಾಹಿತೆಯಾಗಿರುವ ಮಹಿಳೆ ತಿಳಿಸಿದ್ದಾಳೆ.





