ಯು.ಪಿ.ಯಲ್ಲಿ ಮಕ್ಕಳ ಮಾರಣಹೋಮ ಖಂಡಿಸಿ ಗಾಂಧಿ ಪ್ರತಿಮೆ ಎದುರು ಧರಣಿ

ಚಿಕ್ಕಮಗಳೂರು, ಆ.18: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ, ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ನಡೆದಿರುವ ಮಕ್ಕಳ ಮಾರಣಹೋಮ ಖಂಡಿಸಿ ಹಾಗು ದನಗಳ ಹೆಸರಿನಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಗಳನ್ನು ಪ್ರತಿಭಟಿಸಿ ಜನ ಸಂಸ್ಕøತಿ ವೇದಿಕೆ ಆಶ್ರಯದಲ್ಲಿಂದು ವಿವಿಧ ಪಕ್ಷ ಮತ್ತು ಸಂಘಟನೆಗಳ ಪ್ರಮುಖರು ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ಮತ್ತು ಚಿಂತನಸಭೆ ನಡೆಸಿದರು.
ಮೋದಿ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ದೇಶದಲ್ಲಿ ಭೀತಿ ಮತ್ತು ಭ್ರಮೆಗಳನ್ನು ಸೃಷ್ಟಿಸುತಿದ್ದಾರೆ. ರೈತ-ಕಾರ್ಮಿಕರ, ಜನಸಾಮಾನ್ಯರ ವಾಸ್ತವಿಕ ಬದುಕಿನ ವಿಚಾರಗಳನ್ನು ಮರೆಮಾಚಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಮತ್ತು ಜನರ ಭಾವನೆಗಳನ್ನು ಕೆರಳಿಸುವ ಭೂ ಸ್ವಾಧೀನ ಮಸೂದೆ, ಕಾರ್ಮಿಕರ ಕಾನೂನು ತಿದ್ದುಪಡಿ, ಗರಿಷ್ಟ ಬೆಲೆಯ ನೋಟುಗಳ ಅಮಾನ್ಯೀಕರಣ, ಗೋ ಹತ್ಯೆ ನಿಷೇಧ, ತ್ರಿವಳಿ ತಲಾಖ್, ಯುದ್ಧ ಭೀತಿ ಯಂತಹ ಭಾವನಾತ್ಮಕ ವಿಷಯಗಳನ್ನು ದೇಶದ ಉದ್ದಗಲಕ್ಕೂ ಹಬ್ಬಿಸಿ ತಮ್ಮ ಆಡಳಿತದ ದೌರ್ಬಲ್ಯಗಳ ವಿರುದ್ಧ ಜನ ಮಾತಾಡದಂತೆ ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಭಾರತದ ಪ್ರಜಾತಂತ್ರ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯ ಸರ್ಕಾರ ಗಳನ್ನು ದುರ್ಬಲಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಕಭಾಷೆ, ಏಕಸಂಸ್ಕೃತಿ, ಏಕತೆರಿಗೆ, ಸಮಾನ ಶಿಕ್ಷಣದ ಬದಲಿಗೆ ಏಕರೂಪ ಶಿಕ್ಷಣ, ಹಿಂದಿಭಾಷೆ ಹೇರಿಕೆ ಯಂತಹ ವಿಚಾರಗಳನ್ನು ಹಬ್ಬಿಸಿ ದೇಶದ ಬಹುಮುಖಿ ಸಂಸ್ಕೃತಿ ಮತ್ತು ಗಣರಾಜ್ಯ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಅಂತರ್ ರಾಜ್ಯಗಳ ಜಲ ವಿವಾದಗಳನ್ನು ಬಗೆ ಹರಿಸದೇ ಜಾಣಕುರುಡು ಪ್ರದರ್ಶಿಸುತ್ತಿದೆ. ಆಮ್ಲಜನಕದ ಕೊರತೆಯಿಂದ ಉತ್ತರ ಪ್ರದೇಶದಲ್ಲಿ ಮಕ್ಕಳ ಮಾರಣಹೋಮ ನಡೆದಿದ್ದರೂ ದಲಿತರ ಮೇಲೆ ಮಾರಣಾಂತಿಕ ದೌರ್ಜನ್ಯಗಳು ದಿನನಿತ್ಯ ನಡೆಯುತ್ತಿದ್ದರೂ ಸಹ ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸ್ವಪಕ್ಷ ಹಿತ ಕಾಯುತ್ತಿರುವ ನೀತಿಯನ್ನು ತೀವೃವಾಗಿ ಖಂಡಿಸಿ ಯೋಗಿ ಸರ್ಕಾರದ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಮಯದಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್, ಕಾಂಗ್ರೇಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ರೈತ ನಾಯಕರಾದ ಗುರುಶಾಂತಪ್ಪ, ಕೆ.ಕೆ.ಕೃಷ್ಣೇಗೌಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರೇಣುಕಾರಾಧ್ಯ, ಜಾರ್ಜ್ ಆಸ್ಟಿನ್, ದಸಂಸ ವಿಭಾಗೀಯ ಸಂಚಾಲಕ ಅಣ್ಣಯ್ಯ, ರಮೇಶ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಮಾನವ ಬಂಧುತ್ವ ವೇದಿಕೆಯ ಆರದವಳ್ಳಿ ಮೋಹನ, ಪ್ರಗತಿಪರ ದಲಿತ ಒಕ್ಕೂಟದ ಕೂದುವಳ್ಳಿ ಮಂಜುನಾಥ್, ವಕೀಲ ಪುಟ್ಟೇಗೌಡ, ಪರಮೇಶ್, ಲಕ್ಷ್ಮಣ, ದೇವಿಪ್ರಸಾದ್, ಚಂದ್ರಪ್ಪ, ಬಿ.ಅಮ್ಜದ್. ವಿಜಯಕುಮಾರ್, ಕಬ್ಬಿಗೆರೆ ಮೋಹನ್ ಗೋವಿಂದ ನಗರ ಸಭೆ ಮಾಜಿ ಅಧ್ಯಕ್ಷ ಜಮೀಲ್‍ಆಹಮದ್, ಇಕ್ಬಾಲ್, ಬೆಳವಾಡಿ ಶಿವಣ್ಣ ಮತ್ತಿತರರಿದ್ದರು.







