ಅಂತರ್ಜಾಲ ಛಾಯಾಗ್ರಹಣ ಸ್ಪರ್ಧೆಗೆ ಆಹ್ವಾನ
ಬೆಂಗಳೂರು, ಆ.18 : ವಿಶೇಷ ಚೇತನ ಮಕ್ಕಳ ಜೀವನಮಟ್ಟ ಸುಧಾರಿಸುವ ಸಲುವಾಗಿ ಸಿಬಿಎಂ ಸಂಸ್ಥೆ ವತಿಯಿಂದ ವಿಕಲಚೇತನರಿಗಾಗಿ ಅಂತರ್ಜಾಲ ಛಾಯಾಗ್ರಹಣ ಮತ್ತು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯಕ್ ಹಾಗೂ ಉಪನಾಯಕ ಪ್ರಕಾಶ್ ಜಯರಾಮಯ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ವಿಶೇಷ ಚೇತನ ವ್ಯಕ್ತಿಗಳಲ್ಲಿಯೂ ಸಾಧನೆ ಮಾಡುವ ಸಾಮರ್ಥ್ಯವಿದೆ. ಆದರೆ, ಅವರನ್ನು ಪ್ರೋತ್ಸಾಹಿಸಿ ಮುನ್ನಡೆಸುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಹೀಗಾಗಿ ವಿಶೇಷ ಚೇತನರಿಗೆ ಉತ್ಸಾಹ ತುಂಬುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಅಭಿವೃದ್ಧಿಯಾಗಲು ಈ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಪರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ ಅಂಗವಿಕಲ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಪ್ರವೇಶ ಶುಲ್ಕ ವಿಧಿಸಿರುವುದಿಲ್ಲ. ಇದರಲ್ಲಿ ಭಾಗವಹಿಸುವವರು 10 ಛಾಯಾಗ್ರಹಣ, 1 ಕಿರುಚಿತ್ರ ತಯಾರಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ 50 ಜನರ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಹಾಗೂ ಡಿಎಸ್‌ಎಲ್‌ಆರ್ ಕೆಮೆರಾ ಹಾಗೂ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಸೆ.10 ರೊಳಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ http://www.cbmindia.org.in ನಲ್ಲಿ ನೀವು ತೆಗೆದ ಚಿತ್ರ ಮತ್ತು ಕಿರುಚಿತ್ರವನ್ನು ಅಪ್‌ಲೋಡ್ ಮಾಡಬೇಕು ಎಂದು ಅವರು ತಿಳಿಸಿದರು.







