ಶಾಲೆಗಳಿಗೆ ಅನ್ಯ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಿ : ವಿ.ಎಸ್. ಉಗ್ರಪ್ಪ

ಬೆಂಗಳೂರು, ಆ. 18: ಮಾಗಡಿ ತಾಲೂಕಿನ ಶಂಭಯ್ಯಪಾಳ್ಯ ಶಾಲೆಯ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ಶಾಲೆಗೆ ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ಶಿಕ್ಷಣ ಇಲಾಖೆ ನಿರ್ಬಂಧ ಹೇರಬೇಕು. ಶಾಲೆಯ ಮುಖ್ಯಸ್ಥರ ಪೂರ್ವಾನುಮತಿ ಇಲ್ಲದೆ ಶಾಲೆ-ಕಾಲೇಜು ಪ್ರವೇಶ ಕಲ್ಪಿಸಬಾರದು ಎಂದರು.
ಮೇಲ್ಕಂಡ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯನ್ನು ನಿನ್ನೆ ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರದಲ್ಲೆ ಚೇತರಿಸಿಕೊಳ್ಳಲಿದ್ದಾರೆಂದು ಉಗ್ರಪ್ಪ ತಿಳಿಸಿದರು.
ಕೇಂದ್ರದಿಂದ ಅನ್ಯಾಯ: ಕೇಂದ್ರ ಸರಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಉಗ್ರಪ್ಪ, 14ನೆ ಹಣಕಾಸು ಆಯೋಗದ ಪ್ರಕಾರ ರಾಜ್ಯಕ್ಕೆ 1,86.078 ಕೋಟಿ ರೂ.ಗಳಾಗಿದ್ದು, ಕೇಂದ್ರ ಬಜೆಟ್‌ನಲ್ಲಿ 84,651 ಕೋಟಿ ರೂ.ಗಳನ್ನಷ್ಟೇ ಪ್ರಸ್ತಾಪಿಸಿದೆ. ಆದರೆ, 10,563 ಕೋಟಿ ರೂ.ಕಡಿಮೆಯಾಗಿದೆ ಎಂದು ಟೀಕಿಸಿದರು.
ಬರ ಸ್ಥಿತಿ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್ ಅನ್ವಯ ರಾಜ್ಯಕ್ಕೆ ಕೇವಲ 1,527 ಕೋಟಿ ರೂ.ನೀಡಿದ್ದು, ಮಹಾರಾಷ್ಟ್ರಕ್ಕೆ 8,195 ಕೋಟಿ ರೂ., ಗುಜರಾತ್‌ಗೆ-3,894 ಕೋಟಿ ರೂ., ತಮಿಳುನಾಡಿಗೆ-3751 ಕೋಟಿ ರೂ., ಆಂಧ್ರಕ್ಕೆ 2,430 ಕೋಟಿ ರೂ. ಹಾಗೂ ರಾಜಸ್ಥಾನಕ್ಕೆ 2,153 ಕೋಟಿ ರೂ. ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಸ್ಥಿತಿ ಇದ್ದರೂ, ಕೇಂದ್ರ ಅನುದಾನ ನೀಡದೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
‘ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ತಮ್ಮ ಪಕ್ಷದ ಸಿಎಂ ಅಭ್ಯರ್ಥಿ ಘೋಷಿಸಿದ್ದಾರೆ. ಹೀಗಿರುವಾಗ ರಾಜ್ಯ ಸರಕಾರ ಭ್ರಷ್ಟ ಎಂದು ಹೇಳುವ ನೈತಿಕತೆ ಅವರಿಗೆ ಇಲ್ಲ’
-ವಿ.ಎಸ್.ಉಗ್ರಪ್ಪ ಮೇಲ್ಮನೆ ಸದಸ್ಯ







