ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮಡಿಕೇರಿ, ಆ.18 :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರದ ಪ್ರಕರಣಗಳನ್ನು ಹೆಚ್ಚಾಗುತ್ತಿವೆ ಎಂದು ಆರೋಪಿಸಿ, ಐಟಿ ದಾಳಿಗೆ ಒಳಗಾಗಿರುವ ಸಚಿವರುಗಳಾದ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಮಣಿ ಅವರುಗಳ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಘೋಷಣೆಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾಡಳಿತ ಭವನದ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿದ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚೆಗೆ ಐಟಿಯಿಂದ ಸಚಿವ ಡಿ.ಕೆ. ಶಿವ ಕುಮಾರ್ ಅವರ ಮನೆ ಸೇರಿದಂತೆ ಹಲವೆಡೆಗಳಲ್ಲಿ ಧಾಳಿಗಳು ನಡೆದಿದ್ದು, ಈ ಸಂದರ್ಭ ಕೋಟ್ಯಾಂತರ ಹಣ ಪತ್ತೆಯಾಗಿದೆ. ಈ ಹಣ ಎಲ್ಲಿಂದ ಬಂತೆಂದು ಪ್ರಶ್ನಿಸಬೇಕಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಡಿ.ಕೆ. ಶಿವ ಕುಮಾರ್ ಅವರನ್ನು ಪ್ರಶ್ನಿಸಿಲ್ಲ. ಇನ್ನಾದರು ಡಿ.ಕೆ. ಶಿವ ಕುಮಾರ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನಿಡಬೇಕೆಂದು ಆಗ್ರಹಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿರ್ಮೂಲನದ ಭರವಸೆ ನೀಡಿ ಅಧಿಕಾರಕ್ಕೆ ಬಂದು, ರಾಜ್ಯದ ಜನತೆಗೆ ಸಾಕಷ್ಟು ಭಾಗ್ಯಗಳನ್ನು ನೀಡಿದೆ. ಇದೀಗ ‘ಭ್ರಷ್ಟಾಚಾರದ ಭಾಗ್ಯ’ವನ್ನೂ ದಯಪಾಲಿಸಿದೆಯೆಂದು ವ್ಯಂಗ್ಯವಾಡಿ, ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಎಲ್ಲಾ ಸಚಿವರನ್ನು ವಜಾಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕಾಂಗ್ರೆಸ್‍ನ ಪ್ರಭಾವಿ ಸಚಿವ ಡಿ.ಕೆ. ಶಿವ ಕುಮಾರ್ ಅವರಿಗೆ ಸಂಬಂಧಿಸಿದ 79 ಸ್ಥಳಗಳಲ್ಲಿ ಐಟಿ ಧಾಳಿ ನಡೆದ ಸಂದರ್ಭ ಮುಖ್ಯ ಮಂತ್ರಿಗಳು ತಮ್ಮ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಬದಲಾಗಿ ಕೇಂದ್ರ್ರವನ್ನು ದೂಷಿಸಿದರು. ಇದೇ ರೀತಿ ನೋಟು ರದ್ಧತಿಯ ಸಂದರ್ಭ ಆದಾಯ ತೆರಿಗೆ ದಾಳಿಯ ಸಂದರ್ಭ ಸಚಿವ ಜಾರಕಿ ಹೊಳಿ, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗಳಲ್ಲಿ ಕೋಟ್ಯಾಂತರ ಹಣ ಪತ್ತೆಯಾಗಿದೆ. ಹೀಗಿದ್ದೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇದಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಆರೋಪಿಸಿದರು.
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವ ಕುಮಾರ್, ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿ ಹೊಳಿ ಅವರನ್ನು ತಕ್ಷಣ ವಜಾಗೊಳಿಸಿ, ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿಯ ಮಹೇಶ್ ಜೈನಿ, ಬಲ್ಲಾರಂಡ ಮಣಿ ಉತ್ತಪ್ಪ, ಅರುಣ್ ಭೀಮಯ್ಯ, ಅರುಣ್ ಕುಮಾರ್, ಸಜಿಲ್ ಕೃಷ್ಣನ್, ರಾಬಿನ್ ದೇವಯ್ಯ ಸೇರಿದಂತೆ ಹಲ ಪ್ರಮುಖರು , ಕಾರ್ಯಕರ್ತರು ಪಾಲ್ಗೊಂಡಿದ್ದರು.







