ಶೇ.50ರಷ್ಟು ಶಾಸಕರ ಸಂಬಂಧಿಕರಿಗೆ ಮನೆ ಮಂಜೂರು : ಮಾಜಿ ಸಚಿವ ಶಿವಣ್ಣ ಆರೋಪ
ತುಮಕೂರು,ಆ.18: ನಗರದ ದಿಬ್ಬೂರಿನಲ್ಲಿ ನಿರ್ಮಾಣವಾಗಿರುವ 1200 ಮನೆಗಳ ಹಂಚಿಕೆಯಲ್ಲಿ ಶೇ.50ರಷ್ಟು ಮನೆಗಳು ಶಾಸಕರ ಸಂಬಂಧಿಕರಿಗೆ ಕೊಡಲಾಗಿದೆ. ಎಂದು ಮಾಜಿ ಸಚಿವ ಎಸ್.ಶಿವಣ್ಣ ಗಂಭೀರ ಆರೋಪ ಮಾಡಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫಲಾನುಭವಿಗಳ ಪಟ್ಟಿ ತಯಾರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇಬ್ಬರೂ ಸೇರಿ ಪರಿಶೀಲನೆ ನಡೆಸಿ ಪಟ್ಟಿ ತಯಾರಿಸಬೇಕಿತ್ತು. ಆದರೆ ಯಾವುದೇ ತಪಾಸಣೆ ಮಾಡದೆಯೇ ಹಳೇ ಪಟ್ಟಿಯನ್ನು ಬದಲಾಯಿಸಿ ಈಗ ಹೊಸ ಪಟ್ಟಿ ಸಿದ್ಧಪಡಿಸಿದ್ದು, ಅದರಲ್ಲಿ ಶಾಸಕರ ಸಂಬಂಧಿಕರಿಗೇ ಹೆಚ್ಚು ಮನೆಗಳು ಮಂಜೂರಾಗಿವೆ. ಕೂಡಲೇ ಈ ಪಟ್ಟಿಯನ್ನು ರದ್ದುಪಡಿಸಿ ಹಳೇಪಟ್ಟಿಯನ್ನು ಮುಂದುವರೆಸಬೇಕು, ಇಲ್ಲದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಈ ರೀತಿ ಮನಸ್ಸಿಗೆ ಬಂದಂತೆ ಪಟ್ಟಿಯನ್ನು ಬದಲಿಸಿ ಸ್ವಜಾತಿಯವರಿಗೆ ಹೆಚ್ಚಿನ ಆಧ್ಯತೆ ನೀಡಿ ಸ್ಥಳೀಯ ಶಾಸಕರು ಇನ್ನೊಂದು ಪಟ್ಟಿಯನ್ನು ತಯಾರಿಸಿದ್ದು ಇದನ್ನು ಸರ್ಕಾರ ರದ್ದುಗೊಳಿಸಬೇಕು, ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಬಾರದು ಎಂದು ಒತ್ತಾಯಿಸಿದರು.
ನಗರದ 8ಕ್ಕೂ ಹೆಚ್ಚು ಕೊಳಗೇರಿ ನಿವಾಸಿಗಳಿಗಾಗಿ ದಿಬ್ಬೂರು ವಸತಿ ಸಮುಚ್ಛಯ ನಿರ್ಮಾಣ ಮಾಡಿದ್ದು ಇದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಶಾಸಕರು ಹಿಂದಿನ ಪಟ್ಟಿಯನ್ನು ಬದಲಾಯಿಸಿ ಈಗ ಹೊಸದಾಗಿ ಮಾಡಿರುವ ಪಟ್ಟಿಯನ್ನು ತತ್‍ಕ್ಷಣ ರದ್ದುಪಡಿಸಬೇಕು ಎಂದರು.
ನಗರದ ಮಂಡಿಪೇಟೆ ದೊಡ್ಡಚರಂಡಿ ಪಕ್ಕದ 66 ಮಂದಿಗೆ ಶಾಂತಿ ಹೋಟೇಲ್ ಹಿಂದೆ 42 ಮಂದಿಗೆ, ಬೆಳಗುಂಬ ರಸ್ತೆಯ ಎನ್.ಆರ್.ಕಾಲೋನಿ ಪಕ್ಕ 44 ಮಂದಿಗೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದಲ್ಲಿದ್ದ 49 ಮಂದಿಗೆ, ಮಾರಿಯಮ್ಮನಗರದ 78 ಮಂದಿಗೆ, ಅಮಾನಿಕೆರೆಯಲ್ಲಿ ಟೆಂಟ್ ಹಾಕಿಕೊಂಡಿದ್ದ 72 ಮಂದಿ ಹಂದಿ ಜೋಗರಿಗೆ, ಕ್ಯಾತ್ಸಂದ್ರ ಬಳಿಯ ಯಲ್ಲಾರೆಬಂಡೆಯ 157 ಮಂದಿಗೆ ಮತ್ತು ನಗರದ ಅಲ್ಲಲ್ಲಿ ವಾಸವಿರುವ ಬಡ ಕುಟುಂಬಗಳ 692 ಮಂದಿಗೆ ಈ ವಸತಿ ಸಮುಚ್ಛಯದಲ್ಲಿ ಮನೆ ನೀಡಲು ಆಶ್ರಯ ಯೋಜನೆಯಡಿ 1200 ಮಂದಿಯ ಪಟ್ಟಿ ತಯಾರಿಸಿ ಸರ್ಕಾರಕ್ಕೆ ರವಾನಿಸಲಾಗಿದ್ದು ಈಗ ಸದರಿ ಪಟ್ಟಿ ಸಾಕಷ್ಟು ಬದಲಾವಣೆ ಕಂಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ರಾಜೀವ್ ಅವಾಜ್ ಯೋಜನೆಯಡಿ ನಗರದಲ್ಲಿ ಮೂಲಭೂತ ಸೌಲಭ್ಯದೊಂದಿಗೆ ದಿಬ್ಬೂರು ವಸತಿ ಸಮುಚ್ಛಯ ನಿರ್ಮಿಸಿ, ವಸತಿರಹಿತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಬಿಜೆಪಿ ಸರ್ಕಾರ ಅಂತಿಮ ರೂಪ ಕೊಟ್ಟಿತ್ತು. ಅದು ಈಗ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ನಗರ ಶಾಸಕರಿಗೆ ಯೋಜನೆಯೂ ಗೊತ್ತಿಲ್ಲ. ಪ್ರಾಜೆಕ್ಟ್ ಗೊತ್ತಿಲ್ಲ. ಇವರು ಶಾಸಕರಾಗಿ ಯಾವುದೇ ಹೊಸ ಯೋಜನೆ ಮತ್ತು ಅನುದಾನವನ್ನು ತಂದಿಲ್ಲ. ಬಿಜೆಪಿ ಸರ್ಕಾರದ ಯೋಜನೆಗಳಿಗೆ ಕಾಂಗ್ರೆಸ್ ಲೇಪನ ಹಚ್ಚುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರವಿದ್ದಾಗ ತುಮಕೂರು ಮಹಾನಗರಪಾಲಿಕೆಗೆ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಇದನ್ನು ಸಮರ್ಪಕವಾಗಿ ಖರ್ಚು ಮಾಡದ ಹಿನ್ನಲೆಯಲ್ಲಿ ಸಾಕಷ್ಟು ಹಣ ವಾಪಸ್ ಹೋಗಿದೆ. ಸದ್ಯ ರಾಜ್ಯ ಸರ್ಕಾರ ಹೊಸದಾಗಿ ಒಂದು ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಪಿ.ಮಹೇಶ್, ಶಾಂತರಾಜು, ರಾಜೀವ್, ಚಂದನ್‍ಕುಮಾರ್, ಪಂಚಾಕ್ಷರಯ್ಯ, ನಾಗಭೂಷಣ್, ರಾಕೇಶ್, ಎನ್.ಗಣೇಶ್, ಸಿದ್ದೇಶ್ ಮುಂತಾದವರು ಹಾಜರಿದ್ದರು.







