ಸರಕಾರದ ಸೌಲಭ್ಯಗಳ ಸದ್ಬಳಕೆ ಪ್ರಜೆಗಳ ಹಕ್ಕು: ಪ್ರಮೋದ್ ಮಧ್ವರಾಜ್

ಉಡುಪಿ, ಆ.18: ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿ, ಅವರ ಸೇವೆ ಮಾಡುವ ಹೊಣೆ ಜನಪ್ರತಿನಿಧಿ ಮತ್ತು ಅಧಿಕಾರಿಗಳದ್ದು. ಸರಕಾರ ಬಡವರಿಗಾಗಿ ರೂಪಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾದ ಕೋಟ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 94 ಸಿಸಿ, 94ಸಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 12ರವರೆಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅರ್ಜಿಗಳನ್ನು ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕಂದಾಯ ಇಲಾಖೆಗೆ ಜಾಗವನ್ನು ವಾಪಾಸ್ಸು ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಂಕರನಾರಾಯಣ ವ್ಯಾಪ್ತಿಯಲ್ಲೇ 4,626 ಎಕರೆ ಡೀಮ್ಡ್ ಅರಣ್ಯದಿಂದ 2,482 ಎಕರೆ ವಿರಹಿತ ಪಡಿಸಲು ಪ್ರಕ್ರಿಯೆ ನಡೆದಿದೆ. ಕಾಡು ಉಳಿಸುವ ಜೊತೆಗೆ ಬಡ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲೂ ಪಾರ್ಮ್ 50 ಮತ್ತು 53ಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಈಗಾಗಲೇ ಉಡುಪಿ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ತ್ಯಾಜ್ಯ ವಿಲೇವಾರಿಯಲ್ಲೂ ಜಿಲ್ಲೆ ದೇಶಕ್ಕೆ ಮಾದರಿಯಾ ಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಎಲ್ಲಾ ಪಂಚಾಯತ್‌ಗಳ ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿಯನ್ನು ನೀಡಲಾಗಿದ್ದು, ಕಾಲಮಿತಿಯನ್ನು ನಿಗದಿ ಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಕೃಷಿ ಸಲಕರಣೆೆ, ಮಣ್ಣು ಆರೋಗ್ಯ ಕಾರ್ಡ್ ಹಾಗೂ ಹಕ್ಕುಪತ್ರ ಗಳನ್ನು ವಿತರಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ಗ್ರಾಪಂ ಅಧ್ಯಕ್ಷ ಗಣೇಶ್ ಶೆಟ್ಟಿ, ಆವರ್ಸೆ ಗ್ರಾಪಂ ಅಧ್ಯಕ್ಷ ಚಿತ್ತರಂಜನ್‌ದಾಸ್ ಶೆಟ್ಟಿ, ವಡ್ಡರ್ಸೆ ಗ್ರಾಪಂ ಅಧ್ಯಕ್ಷ ಹೇಮ, ಬಿಲ್ಲಾಡಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾಡೂರು ಪಿಡಿಓ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
34 ಅರ್ಜಿಗಳ ವಿಲೇವಾರಿ
ಜನಸ್ಪಂದನ ಸಭೆಯಲ್ಲಿ ಒಟ್ಟು 34 ಅರ್ಜಿಗಳನ್ನು ವಿಲೇವಾರಿ ಮಾಡ ಲಾಯಿತು. ಹೆಚ್ಚಿನ ಅರ್ಜಿಗಳು ಭೂಮಿ ನೀಡಲು ಕೋರಿ ಬಂದಿದ್ದು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭೂಮಿಹಕ್ಕು ನೀಡುವುದು ಕಷ್ಟವಾದ್ದರಿಂದ ಉಡುಪಿ ಮಾದರಿಯಲ್ಲಿ ವಸತಿ ಯೋಜನೆಯಡಿ ಜಾಗ ಹಾಗೂ ಮನೆ ನೀಡಿ ಎಂದು ಸಚಿವ ಪ್ರೋದ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದ ಸಚಿವರು, ದೀನ ದಯಾಳ್ ಉಪಾಧ್ಯಾಯ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂನವರಿಗೆ ಸೂಚಿಸಿದರು. ಸರಕಾರಿ ಬಸ್‌ಗೂ ಬೇಡಿಕೆ ಬಂದಿತಲ್ಲದೆ, ಜನಸ್ಪಂದನದಲ್ಲಿ ಡೈವೋರ್ಸ್ ಕೇಸನ್ನು ರಾಜಿ ಪಂಚಾಯಿತಿ ವಾಡಿಸಿ ಎಂದು ಒಬ್ಬರು ಅರ್ಜಿ ನೀಡಿದ್ದರು.







