ಒಂದು ತಿಂಗಳೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಧ್ರುವನಾರಾಯಣ ಸೂಚನೆ

ಚಾಮರಾಜನಗರ, ಆ. 18 : ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿ ಹಾಗೂ ವಿಸ್ತರಣೆ ಕೆಲಸವನ್ನು ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಳಂದೂರು, ಚಾಮರಾಜನಗರ, ಕೊಳ್ಳೇಗಾಲ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ಸಾಕಷ್ಟು ಸಮಯ ಕಳೆದಿದೆ. ತೊಡಕು ಇರುವ ಕಡೆ ಪರಿಹಾರ ಕಂಡುಕೊಂಡು ಇನ್ನು ಒಂದು ತಿಂಗಳೊಳಗೆ ಕಾಮಗಾರಿಯನ್ನು ಮುಗಿಸಬೇಕು. ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಧ್ರುವನಾರಾಯಣ ತಿಳಿಸಿದರು.
ಹೆದ್ದಾರಿ ಕಾಮಗಾರಿ ವಿಸ್ತರಣೆಗೆ ಪಟ್ಟಣ ವ್ಯಾಪ್ತಿಯಲ್ಲಿ ಸಮಸ್ಯೆಗಳು ಉದ್ಭವಿಸಿದರೆ ಸ್ಥಳೀಯ ಜನಪ್ರತಿನಿಧಿಗಳು ಸಹ ಪರಿಹಾರ ಕ್ರಮಗಳಿಗೆ ಕೈಜೋಡಿಸಬೇಕು. ಕಾಮಗಾರಿ ಪ್ರಗತಿಯಾಗಿ ಪೂರ್ಣಗೊಂಡರೆ ಪಟ್ಟಣದ ಸ್ವರೂಪವೇ ಬದಲಾಗಲಿದೆ. ಜನರಿಗೂ ಅನುಕೂಲವಾಗಲಿದೆ ಎಂದರು.
ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಯಡಿ ಬಾಕಿ ಉಳಿದ ಎಲ್ಲಾ ಹಾಡಿ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಯಾವುದೂ ಭಾಗವೂ ಸಹ ವಿದ್ಯುತ್ ಸಂಪರ್ಕ ಇಲ್ಲವೆಂಬ ಸಬೂಬು ಹೇಳುವಂತಿಲ್ಲ. ಪೂರ್ಣಪ್ರಮಾಣದಲ್ಲಿ ಎಲ್ಲ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದೇ ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಈ ಕೆಲಸ ಜರೂರಾಗಿ ಆಗಬೇಕು. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚೆಸ್ಕಾಂ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಕಾಮಗಾರಿ ಪ್ರಕ್ರಿಯೆಗೆ ಮುಂದಾಗಬೇಕೆಂದು ಧ್ರುವನಾರಾಯಣ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ 130 ಗ್ರಾಮಪಂಚಾಯಿತಿಗಳಿಗೂ ಸಮರ್ಪಕವಾಗಿ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಬೇಕು. ಬಿಎಸ್‍ಎನ್‍ಎಲ್ ಅಧಿಕಾರಿಗಳು ತಾಲೂಕು ಪಂಚಾಯತ್ ಸಭೆಗಳಿಗೂ ಹಾಜರಾದರೆ ಹೆಚ್ಚಿನ ಸಮಸ್ಯೆಗಳ ಅರಿವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಜನರ ಸೇವೆಗಳಿಗೆ ಇಂಟರ್‍ನೆಟ್ ಇಂದು ಅತ್ಯವಶ್ಯವಾಗಿದೆ. ಹೀಗಾಗಿ ಅಂತರ್ಜಾಲ ಉನ್ನತೀಕರಣ ಹಾಗೂ ತ್ವರಿತ ಸೇವೆಗೆ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆಯನ್ನು ತ್ವರಿತಗೊಳಿಸಬೇಕು. ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನಲ್ಲಿ ಕೈಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ಪೂರೈಸಲಾಗುತ್ತಿರುವ ನೀರಿನ ಪೈಪ್ ಲೈನ್‍ಗಳು ಸೋರಿಕೆಯಾಗುತ್ತಿವೆಯೇ ಎಂಬ ಬಗ್ಗೆ ವ್ಯಾಪಕವಾಗಿ ಪರಿಶೀಲಿಸಬೇಕು. ವಿದ್ಯುತ್, ಇತರೆ ಇಲಾಖೆಗಳು ಅವರ ವ್ಯಾಪ್ತಿಯ ಕಾಮಗಾರಿ ನಡೆಸುವ ಸಂದರ್ಭದಲ್ಲಿ ನೀರಿನ ಪೈಪ್ ಲೈನ್‍ಗಳಿಗೆ ಹಾನಿಯಾಗುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕಾಮಗಾರಿ ಕೈಗೊಳ್ಳುವ ಇಲಾಖಾ ಅಧಿಕಾರಿಗಳ ಸಭೆಯನ್ನು ಮೊದಲು ಕರೆದು ಪೈಪ್ ಲೈನ್ ಹಾದುಹೋಗಿರುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಸ್ವಚ್ಚ ಭಾರತ್ ಮಿಷನ್ ಅಡಿ ಶೌಚಾಲಯಗಳ ನಿರ್ಮಾಣ ಕಾರ್ಯವು ಹೆಚ್ಚಿನ ವೇಗದಲ್ಲಿ ನಡೆಯಬೇಕಿದೆ. ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯು ಬಯಲು ಶೌಚ ಮುಕ್ತವಾಗಿ ಘೋಷಣೆಯಾಗಬೇಕಿದೆ. ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಪ್ರೋತ್ಸಾಹಧನವು ಫಲಾನುಭವಿಗಳಿಗೆ ಲಭಿಸುವುದರಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಹೆಚ್ಚಿನ ಪ್ರಗತಿ ಸಾಧಿಸಬೇಕು. ಶೌಚಾಲಯ ಬಳಕೆಗೆ ಜನರನ್ನು ಉತ್ತೇಜಿಸಬೇಕು ಎಂದು ಧ್ರುವನಾರಾಯಣ ತಿಳಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸುವ ಕಾರ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸಬೇಕು. ಶಿಕ್ಷಣದಿಂದ ಯಾರೂ ಸಹ ವಂಚಿತರಾಗಬಾರದು. ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡಗಳು ಕಾಲಮಿತಿಯೊಳಗೆ ಪೂರ್ಣವಾಗಬೇಕು. ಸಮಸ್ಯೆಗಳಿದ್ದಲ್ಲಿ ನಿವಾರಣೆ ಮಾಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಧ್ರುವನಾರಾಯಣ ತಿಳಿಸಿದರು.
ಉದ್ಯೋಗ ಖಾತರಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಪ್ರಗತಿಯನ್ನು ಸುದೀರ್ಘವಾಗಿ ಲೋಕಸಭಾ ಸದಸ್ಯರು ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಶಾಸಕರಾದ ಜಯಣ್ಣ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಚಾಮರಾಜನಗರ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಯಳಂದೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ನಂಜುಂಡಯ್ಯ, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಕಾವೇರಿ, ಎಸ್. ನಾಗನಾಯ್ಕ, ಅರುಣ್ ಮನಮೋಹನ್, ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾದ ಶಾಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ, ಕಲ್ಯಾಣಮ್ಮ, ರಾಜೇಶ್, ಇತರರು ಸಭೆಯಲ್ಲಿ ಹಾಜರಿದ್ದರು.







