ಹಣ ದುರುಪಯೋಗ ಪ್ರಕರಣ: ಆರೋಪಿಗೆ ಜಾಮೀನು
ಮಂಗಳೂರು, ಆ. 18: ಹಣ ದುರುಪಯೋಗ ಆರೋಪದ ಪ್ರಕರಣವೊಂದರಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ನಿಯಮಿತದ ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮೀನು ಮಾರಾಟ ಮಂಡಳಿಯಲ್ಲಿ ಹಣ ದುರುಪಯೋಗ, ಮೀನುಗಾರಿಕೆಗೆ ವಿತರಿಸಬೇಕಾದ ಡೀಸೆಲ್ ಪ್ರಮಾಣದಲ್ಲಿ ಮೋಸ, ದುರ್ಲಾಭಕ್ಕೆ ಡೀಸೆಲ್ ವಿತರಣೆ, ಪಾಸ್ ಪುಸ್ತಕ, ಬಿಲ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತೆರೆದ ಮಾರುಕಟ್ಟೆಯಲ್ಲಿ ಖರೀದಿಸಿದ ಡೀಸೆಲ್‌ಗೆ ಸರಕಾರದಿಂದ ರಿಯಾಯಿತಿ ದೊರೆಯುವುದಿಲ್ಲ. ಪಾಸ್ ಪುಸ್ತಕ ಬೋಟ್ ಮಾಲಕರಲ್ಲಿಯೇ ಇರುತ್ತದೆ. ಡೀಸೆಲ್ ಸರಬರಾಜು ಯಂತ್ರ ಗಣಕೀಕೃತವಾಗಿದ್ದು, ಬಿಲ್ ಸ್ವಯಂಚಾಲಿತ ಆಗಿರುತ್ತದೆ. ಬಿಲ್ ಆನ್‌ನೈಲ್‌ನಲ್ಲಿ ಇರುತ್ತದೆ. ದೂರಿನಲ್ಲಿ ನಿಯಮಿತದ ಆಡಿಟ್ ವರದಿ ನೀಡಿಲ್ಲ, ವಿನಾಕಾರಣ ಪ್ರಕರಣದಲ್ಲಿ ಆರೋಪಿಗಳನ್ನು ಸಿಲುಕಿಸಲಾಗಿದೆ ಎಂದು ಆರೋಪಿಗಳ ಪರ ವಾದ ಮಂಡಿಸಲಾಗಿತ್ತು.
ಆರೋಪಿಗಳ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಗಳ ಪರ ರಾಘವೇಂದ್ರ ರಾವ್, ಕಿರಣ್ ಕುಮಾರ್, ಗೌರಿ ಶೆಣೈ ವಾದಿಸಿದ್ದರು.







