ರೊಹಿಂಗ್ಯಾ ವಲಸಿಗರ ಗಡಿಪಾರು ಚಿಂತನೆ: ಕೇಂದ್ರಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟಿಸ್

ಹೊಸದಿಲ್ಲಿ, ಆ. 18: ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಮ್ಯಾನ್ಮಾರ್‌ನ ಸುಮಾರು 40,000 ಅಕ್ರಮ ರೊಹಿಂಗ್ಯಾ ವಲಸಿಗರನ್ನು ಭಾರತದಿಂದ ಗಡಿಪಾರು ಮಾಡುವ ಭಾರತ ಸರಕಾರದ ಚಿಂತನೆಗೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶುಕ್ರವಾರ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸು ನೀಡಿರುವ ಎನ್‌ಎಚ್‌ಆರ್‌ಸಿ, ಈ ವಿಷಯದ ಕುರಿತು ನಾಲ್ಕು ವಾರಗಳೊಳಗೆ ವಿಸ್ತೃತ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ನಿರಾಶ್ರಿತರು ವಿದೇಶದ ಪ್ರಜೆಗಳು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಅವರು ಮಾನವರು. ಭಾರತ ಸರಕಾರ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪರಿಸ್ಥಿತಿಯ ಪ್ರತಿ ಆಯಾಮಗಳನ್ನು ಪರಿಶೀಲಿಸಬೇಕು ಎಂದು ಆಯೋಗ ಹೇಳಿದೆ.
ಮಾನವ ಹಕ್ಕು ಆಯಾಮದ ಹಿನ್ನೆಲೆಯಲ್ಲಿ ತಾನು ಈ ವಿಷಯದ ಮಧ್ಯೆ ಪ್ರವೇಶಿಸುವುದು ಸೂಕ್ತವಾದುದು ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.
ಭಾರತ ಅಥವಾ ಇತರ ದೇಶದ ಪ್ರಜೆ ಎಂಬ ವ್ಯತ್ಯಾಸ ಪರಿಗಣಿಸದೆ ಬದುಕುವ ಹಕ್ಕು ಹಾಗೂ ವೈಯುಕ್ತಿಕ ಸ್ವಾತಂತ್ರವನ್ನು ಎಲ್ಲರಿಗೂ ನೀಡಬೇಕು ಎಂದು ಭಾರತೀಯ ಸಂವಿಧಾನದ ಪ್ರತಿಪಾದಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದನ್ನು ಎನ್‌ಎಚ್‌ಆರ್‌ಸಿ ಪುನರುಚ್ಛರಿಸಿದೆ.





