ಢೋಂಗಿ ಜಾತ್ಯತೀತವಾದಿಗಳ ಬಗ್ಗೆ ಎಚ್ಚರ: ಮುಖ್ಯಮಂತ್ರಿ
35 ಮಂದಿ ಮೌಲ್ವಿಗಳ ಹಜ್‌ಯಾತ್ರೆಯ ಬೀಳ್ಕೊಡುಗೆ ಹಾಗೂ 35 ಅಂಗವಿಕಲರಿಗೆ ಆಟೋ ವಿತರಿಸುವ ಕಾರ್ಯಕ್ರಮ

ಬೆಂಗಳೂರು, ಆ.18: ಕೆಲವರು ತಮ್ಮನ್ನು ಜಾತ್ಯತೀತವಾದಿಗಳು ಎನ್ನುತ್ತಾರೆ. ಆದರೆ, ಕೋಮುವಾದಿಗಳ ಜೊತೆ ಕೈ ಜೋಡಿಸುತ್ತಾರೆ. ಅಂತಹವರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕೆಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಪುರಭವನದಲ್ಲಿ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಯೋಜಿಸಿದ್ದ 35 ಮಂದಿ ಮೌಲ್ವಿಗಳ ಹಜ್‌ಯಾತ್ರೆಯ ಬೀಳ್ಕೊಡುಗೆ ಹಾಗೂ 35 ಅಂಗವಿಕಲರಿಗೆ ಆಟೋ ವಿತರಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೌಲ್ವಿಗಳ ಹಜ್‌ಯಾತ್ರೆ ಶುಭಕರವಾಗಿರಲಿ. ಪ್ರತಿಯೊಬ್ಬರೂ ತಮ್ಮ ಯಾತ್ರೆ ಸಂದರ್ಭದಲ್ಲಿ ರಾಜ್ಯದ ಜನತೆಯ ಒಳಿತಿಗಾಗಿ ಹಾಗೂ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ಶಾಶ್ವತವಾಗಿರಲೆಂದು ಪ್ರಾರ್ಥಿಸುವಂತೆ ಅವರು ಮನವಿ ಮಾಡಿದರು.
ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಮೌಲ್ವಿಗಳಿಗೆ ಒಮ್ಮೆಯಾದರೂ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಇರುತ್ತದೆ. ಹಜ್‌ಯಾತ್ರೆ ಅಲ್ಲಾಹ್‌ನ ಕರೆ. ಆತ ಯಾರನ್ನು ಆಯ್ಕೆ ಮಾಡುತ್ತಾನೋ ಅವರೇ ಹೋಗಲು ಸಾಧ್ಯವಾಗುತ್ತದೆ. ಝಮೀರ್ ಅಹ್ಮದ್ ಕಳೆದ 20 ವರ್ಷಗಳಿಂದ ಬಡವರನ್ನು ಗುರುತಿಸಿ ಹಜ್‌ಯಾತ್ರೆಗೆ ಕಳುಹಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಹೇಳಿದರು.
ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವುದು ಸಂವಿಧಾನ ಬದ್ಧವಾಗಿ ನಾವು ನಿರ್ವಹಿಸಬೇಕಾದ ಕರ್ತವ್ಯ. ಟಿಪ್ಪುಸುಲ್ತಾನ್ ಕೇವಲ ಮುಸ್ಲಿಮರಿಗೆ ಸೇರಿದ ವ್ಯಕ್ತಿಯಲ್ಲ. ಇಡೀ ಸಮಾಜಕ್ಕೆ ಸೇರಿದವರು. ಅವರ ಜಯಂತಿ ಆಚರಣೆ ಮಾಡುವ ನಿರ್ಧಾರ ಕೈಗೊಂಡಿದ್ದು ಮತಗಳನ್ನು ಪಡೆಯುವ ಉದ್ದೇಶಕ್ಕಲ್ಲ. ದೇಶಪ್ರೇಮಿಯನ್ನು ಗೌರವಿಸಲು ಎಂದು ಮುಖ್ಯಮಂತ್ರಿ ಹೇಳಿದರು.
ಗೋರಕ್ಷಣೆಯ ಹೆಸರಿನಲ್ಲಿ ಕೇವಲ ಅಲ್ಪಸಂಖ್ಯಾತರ ಮೇಲಷ್ಟೇ ಅಲ್ಲ, ದಲಿತರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಗೋಮಾಂಸವನ್ನು ಕೇವಲ ಅಲ್ಪಸಂಖ್ಯಾತರು ಮಾತ್ರ ಸೇವಿಸುವುದಿಲ್ಲ. ಬೇರೆ ಸಮುದಾಯದವರು ತಿನ್ನುತ್ತಾರೆ. ಮನುಷ್ಯನ ಆಹಾರದ ಹಕ್ಕಿನ ಮೇಲೆ ಯಾರೂ ನಿಯಂತ್ರಣ ಹೇರಬಾರದು. ಆದುದರಿಂದಲೆ, ಇತ್ತೀಚೆಗೆ ಕೇಂದ್ರ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ತಿರಸ್ಕರಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಜಾತ್ಯತೀತ ನಾಯಕ ಹೇಗಿರಬೇಕು, ಎಲ್ಲ ಸಮುದಾಯಗಳನ್ನು ಜೊತೆಗೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಬಳಿ ತರಬೇತಿ ಪಡೆಯಬೇಕು ಎಂದರು.
ಜಾತ್ಯತೀತ ತತ್ವದ ಬಗ್ಗೆ ಕೇವಲ ಹೇಳಿಕೆಗಳನ್ನು ನೀಡಿದರೆ ಸಾಲದು, ಅದನ್ನು ತಮ್ಮ ಕಾರ್ಯಕ್ರಮಗಳು, ಯೋಜನೆಗಳ ಮೂಲಕ ಕಾರ್ಯರೂಪಕ್ಕೆ ತರುವುದು ಜಾತ್ಯತೀತ ನಾಯಕನ ಗುಣ. ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಮುಸ್ಲಿಮರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ಹೈದರಾಬಾದ್‌ನ ಎಂಐಎಂ ಪಕ್ಷ ಇಲ್ಲಿ ಬಂದು ಮಾಡುವುದೇನಿದೆ. ಇಲ್ಲಿನ ಮುಸ್ಲಿಮರು ಶಾಂತಿಯಿಂದ ಇದ್ದಾರೆ, ಅದನ್ನು ಭಂಗ ಮಾಡಬೇಡಿ ಎಂದು ಝಮೀರ್ ಅಹ್ಮದ್ ಮನವಿ ಮಾಡಿದರು.
ಎಂಐಎಂ ಹಾಗೂ ಎಸ್‌ಡಿಪಿಐಗೆ ಹೋಗುವ ಪ್ರತಿಯೊಂದು ಮತವು ಪರೋಕ್ಷವಾಗಿ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಆದುದರಿಂದ, ಮುಸ್ಲಿಮರು ಭಾವನಾತ್ಮಕವಾಗಿ ಯೋಚನೆ ಮಾಡದೆ, ತಮ್ಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಅವರು ಕೋರಿದರು.
ಕಾರ್ಯಕ್ರಮದಲ್ಲಿ ಮೌಲಾನ ಸೈಯ್ಯದ್ ಷಾ ಹಸನ್ ಮುಹಮ್ಮದ್ ಶಂಶುಲ್‌ಹಕ್ ಖಾದ್ರಿ, ವೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಅಸ್ಸಾಂ ರಾಜ್ಯದ ಶಾಸಕ ಅನ್ವರ್ ಹುಸೇನ್, ಮುಖಂಡರಾದ ಅಯ್ಯೂಬ್‌ಖಾನ್, ಜಿ.ಗೋವಿಂದರಾಜು, ಟಿಪ್ಪು, ಮಿಸ್ಬಾ ಮುಕರ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಝಮೀರ್‌ಗೆ ಸ್ವಾಗತ
ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಝಮೀರ್‌ಅಹ್ಮದ್‌ಖಾನ್ ರನ್ನು ಜೆಡಿಎಸ್‌ಗೆ ಸ್ವಾಗತಿಸಿದ್ದೆ. ಈಗ ನಾನೇ ಅವರನ್ನು ಕಾಂಗ್ರೆಸ್ ಪಕ್ಷಕ್ಕೂ ಸ್ವಾಗತಿಸಿದ್ದೇನೆ. ಈಗಾಗಲೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಜೊತೆ ಚರ್ಚೆ ನಡೆಸಲಾಗಿದ್ದು, ಡಿಸೆಂಬರ್ ಅಥವಾ ಜನವರಿಯಲ್ಲಿ ಅಧಿಕೃತವಾಗಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







