ಪುತ್ತೂರು: ಕಾರ್ಮಿಕರ ಪಿಂಚಣಿಗೆ ಆಧಾರ್ ಜೋಡಣೆ

ಪುತ್ತೂರು, ಆ. 18: ಉದ್ಯಮಿ ಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರವರ್ತನೆಯ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‌ನ ಜನಸೇವಾ ಕೇಂದ್ರದಲ್ಲಿ ಕ್ಯಾಂಪ್ಕೋ, ಬೀಡಿ ಹಾಗೂ ಇತರ ಕಾರ್ಮಿಕರ ಪಿಂಚಣಿಗೆ ಆಧಾರ್ ಜೋಡಿಸುವ ಕಾರ್ಯಕ್ರಮ ಶುಕ್ರವಾರ ನಗರದ ಬೈಪಾಸ್‌ನಲ್ಲಿರುವ ಆರ್‌ಇಬಿ ಕಟ್ಟಡದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ, ಅಶೋಕ್ ಕುಮಾರ್ ರೈ ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ವಿಚಾರಗಳಿಗೂ ಆಧಾರ್ ಕಾರ್ಡ್ ಕಡ್ಡಾಯ. ಈ ನಿಟ್ಟಿನಲ್ಲಿ ಕಾರ್ಮಿಕರಿಗಾಗುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಪಿಂಚಣಿಗೆ ಟ್ರಸ್ಟ್‌ನಿಂದ ಆಧಾರ್ ಜೋಡಣೆ ಮಾಡಲಾಗುತ್ತಿದೆ. ಟ್ರಸ್ಟ್‌ನಿಂದ ಈಗಾಗಲೇ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಅದರ ಮುಂದಿನ ಭಾಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಯಾವುದೇ ಲಾಭದ ದೃಷ್ಠಿಯಿಂದ ನಾನು ಇಂತಹ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ತಾನು ಸಂಪಾದಿಸಿದ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಳ್ಳುವ ಇಚ್ಛೆ ಇದೆ. ನನ್ನ ಈ ಸಮಾಜಮುಖಿ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು.
ಸುಮಾರು 600ಕ್ಕಿಂತಲೂ ಮಿಕ್ಕಿ ಕ್ಯಾಂಪ್ಕೋ, ಬೀಡಿ ಹಾಗೂ ಇನ್ನಿತರ ಕಾರ್ಮಿಕರು ತಮ್ಮ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಿಸಿದರು. ಕಚೇರಿಯ ಸಿಬಂದಿ ಲಿಂಗಪ್ಪ ಸ್ವಾಗತಿಸಿ, ವಿಜಿತ್ ವಂದಿಸಿದರು. ಅಪೇಕ್ಷಾ ಕಾರ್ಯಕ್ರಮ ನಿರೂಪಿಸಿದರು.







