ಮಂಗಳೂರಿಗೂ ’ಇಂದಿರಾ ಕ್ಯಾಂಟೀನ್’: ರೈ ಭರವಸೆ

ಬಂಟ್ವಾಳ, ಆ. 18: ಹಸಿವು ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯ ಬಳಿಕ ಆರಂಭಿಸಿರುವ ’ಇಂದಿರಾ ಕ್ಯಾಂಟೀನ್’ ಮಂಗಳೂರಿಗೂ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಭರವಸೆ ನೀಡಿದ್ದಾರೆ.
ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಮಂಜೂರಾದ ಮನೆ ನಿವೇಶನ ಹಕ್ಕುಪತ್ರವನ್ನು ಇಲ್ಲಿನ ಸತ್ಯಶ್ರೀ ಸಭಾಂಗಣದಲ್ಲಿ ಶುಕ್ರವಾರ ವಿತರಿಸಿ ಬಳಿಕ ಅವರು ಮಾತನಾಡಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿರವರ ಕನಸಿನಂತೆ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರ ಭೂ ಮಸೂದೆ ಕಾಯ್ದೆ ಮೂಲಕ ಉಳುವವನಿಗೆ ಹೊಲದೊಡೆಯ ಆಗಿದ್ದಾರೆ. ಆ ಬಳಿಕ ಹಂತ ಹಂತವಾಗಿ ದರ್ಖಾಸು, ಅಕ್ರಮ-ಸಕ್ರಮ, 94ಸಿ ಮತ್ತು 94ಸಿಸಿ ಮತ್ತಿತರ ಯೋಜನೆಯಿಂದಾಗಿ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಭೂ ಹಿಡುವಳಿದಾರರ ಹೆಚ್ಚಳ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದರು.
ರಾಜ್ಯದಲ್ಲೇ ಮೊದಲ ಬಾರಿಗೆ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕುಪತ್ರ ನೀಡಿದ ಹೆಗ್ಗಳಿಕೆ ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಮೂಲಕ ಶೇ. 100ರಷ್ಟು ಹಕ್ಕುಪತ್ರ ವಿತರಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಂದಿಗೆ 94ಸಿ ಮತ್ತು 94ಸಿಸಿ ಯೋಜನೆ ಹಕ್ಕುಪತ್ರ, 40ಕ್ಕೂ ಹೆಚ್ಚು ಮಂದಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, ಮಳೆಹಾನಿ ಪರಿಹಾರ ಮತ್ತಿತರ ಚೆಕ್ ವಿತರಿಸಿದರು. ಕಂದಾಯ ನಿರೀಕ್ಷಕ ರಾಮ ಕೆ. ಮತ್ತು ಗ್ರಾಮಕರಣಿಕ ನಾಗರಾಜ್‌ರನ್ನು ಅಭಿನಂದಿಸಲಾಯಿತು.
ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಜೀವಿ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಮಾಜಿ ಸದಸ್ಯ ಆಲ್ಫೋನ್ಸ್ ಮಿನೇಜಸ್, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಎನ್.ಪ್ರಕಾಶ ಕಾರಂತ, ಆಲ್ಬರ್ಟ್ಮಿನೇಜಸ್ ಮತ್ತಿತರರು ಇದ್ದರು.
ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಸ್ವಾಗತಿಸಿ, ವಂದಿಸಿದರು. ಕಂದಾಯ ನಿರೀಕ್ಷಕ ರಾಮಕೆ. ಕಾರ್ಯಕ್ರಮ ನಿರೂಪಿಸಿದರು.







