ಮೀನುಗಾರಿಕೆ ಸಲಕರಣೆಗೆ ಜಿಎಸ್‌ಟಿ ವಿನಾಯಿತಿ ನೀಡಲು ಮನವಿ: ಮಟ್ಟಾರು ರತ್ನಾಕರ ಹೆಗ್ಡೆ
ಉಡುಪಿ, ಆ.18: ಮೀನುಗಾರರು ಬಳಸುವ ಸಲಕರಣೆಗಳಾದ ಬಲೆ, ಮಂಜುಗಡ್ಡೆ ಇತ್ಯಾದಿಗಳ ಮೇಲೆ ಜಿಎಸ್‌ಟಿ ಶೇ.12ರಷ್ಟಿದ್ದು ಅದನ್ನು ಶೇ.5ಕ್ಕೆ ಇಳಿಸುವಂತೆ ಅಥವಾ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪಮೀನುಗಾರರ ಪರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರ ಮುಖಂಡರೊಂದಿಗೆ ಪಕ್ಷದ ನಿಯೋಗ ದಿಲ್ಲಿಗೆ ತೆರಳಿ ಕೃಷಿ ಸಚಿವರು ಹಾಗೂ ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಅನೇಕ ಯೋಜನೆಗಳ ಬಗ್ಗೆ ಅವರ ಗಮನ ಸೆಳೆಯಲಾಗಿದೆ. ಹೆಜಮಾಡಿ ಬಂದರಿನ ಅಭಿವೃದ್ಧಿಗೆ 140 ಕೋಟಿ ರೂ.ನಲ್ಲಿ ಕೇಂದ್ರದ ಪಾಲು 70ಕೋಟಿ ರೂ.ವನ್ನು ಸ್ಥಳದಲ್ಲಿಯೇ ಮಂಜೂರು ಮಾಡಿದ್ದಾರೆ. ಈ ಯೋಜನೆ ಆದಷ್ಟು ಬೇಗ ಕಾರ್ಯರೂಪಗೊಳ್ಳಬೇಕೆಂದು ಸಚಿವರು ಆದೇಶಿಸಿದ್ದಾರೆ ಎಂದರು.
ಜಿಲ್ಲೆಯ ಮರಳಿನ ಸಮಸ್ಯೆ ತೀವ್ರಗೊಂಡಿದ್ದು, ಇದೀಗ ಮರಳನ್ನು ಗೊತ್ತು ಮಾಡಿದ ಜಾಗದಲ್ಲಿ ತೆಗೆಯುವ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಆದರೆ ವ್ಯವಸ್ಥಿತವಾಗಿ ಕಾಂಗ್ರೆಸಿಗರಿಗಲ್ಲದೆ ಬೇರೆಯವರಿಗೆ ಪರವಾನಿಗೆ ನೀಡ ಬಾರದೆಂದು ಅನಾವಶ್ಯಕ, ಅನಗತ್ಯ ದಾಖಲೆಗಳನ್ನು ಕೇಳಲಾಗುತ್ತಿದೆ. ಕಾಂಗ್ರೆಸಿ ಗರಿಗೆ ಮರಳುಗಾರಿಕೆ ಒಂದು ವ್ಯವಹಾರವಾಗಿದೆ ಎಂದು ಅವರು ದೂರಿದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ಪಡಿತರ ಚೀಟಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಅಮಾನತುಗೊಳಿಸಲಾಗಿದೆ. ಇದರಿಂದಾಗಿ ಬಡ ಜನತೆ ಗಣೇಶೋತ್ಸವ ಮತ್ತು ಇತರ ಹಬ್ಬಗಳಿಗೆ ಪಡಿತರ ಸಕ್ಕರೆ, ಅಕ್ಕಿ, ಗೋದಿ ಸಿಗದೆ ತೊಂದರೆಗೆ ಒಳಗಾಗಿದ್ದಾರೆ ಎಂದರು.
ಮೂಡಬಿದ್ರೆಯ ವಿದ್ಯಾರ್ಥಿನಿ ಕಾವ್ಯಳ ಸಾವಿನಲ್ಲಿ ರಾಜಕೀಯ ಸಲ್ಲದು. ಸರಕಾರ ಪೂರ್ಣ ಸಹಕಾರ ನೀಡಿದರೂ ಕೂಡಾ ಉದ್ದೇಶ ಪೂರ್ವಕವಾಗಿ ಈ ಪ್ರಕರಣ ಭೇದಿಸುವಲ್ಲಿ ಪೋಲಿಸ್ ಇಲಾಖೆ ಮೀನಾ ಮೇಷ ಎಣಿಸುತ್ತಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಒಂದು ಸಂಸ್ಥೆಯ ಹೆಸರನ್ನು ಈ ರೀತಿಯಾಗಿ ಹಾಳು ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಮಂಗಳೂರಿನ ರಸ್ತೆಯೊಂದಕ್ಕೆ ಮುಲ್ಕಿ ಸುಂದರ್ ರಾಮ ಶೆಟ್ಟಿಯವರ ಹೆಸರನ್ನು ಇಡುವುದರಿಂದ ಸಮಾಜ ಅವರಿಗೆ ಗೌರವವನ್ನು ನೀಡಿದಂತಾಗುತ್ತದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕುಯಿಲಾಡಿ ಸುರೇಶ್ ನಾಯಕ್, ಕಟಪಾಡಿ ಶಂಕರ ಪೂಜಾರಿ, ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರವಿ ಅಮೀನ್ ಉಪಸ್ಥಿತರಿದ್ದರು.







