ಸುನ್ನೀ ಮಹಲ್ ಸಮಸ್ತದ ಕೇಂದ್ರವಾಗಿ ಕಾರ್ಯನಿರ್ವಹಿಸಲಿ: ಪುತ್ತೂರು ತಂಙಳ್

ಪುತ್ತೂರು, ಆ.18: ಸುನ್ನೀ ಮಹಲ್ ಕಚೇರಿಯು ಎಸ್‌ಕೆಎಸ್‌ಎಸ್‌ಎಫ್ ಕಚೇರಿಗೆ ಮಾತ್ರ ಸೀಮಿತಗೊಳ್ಳದೆ ‘ಸಮಸ್ತ’ ಸಂಘಟನೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.
ಅವರು ಶುಕ್ರವಾರ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿನ ಎ.ಎಂ. ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ವಲಯ ಕಚೇರಿ ‘ಸುನ್ನೀ ಮಹಲ್’ ಉದ್ಘಾಟಿಸಿ ಮಾತನಾಡಿದರು.
‘ಸಮಸ್ತ’ಕ್ಕೆ ತನ್ನದೇ ಆದ ನಾಯಕತ್ವ ಹಾಗೂ ಸಂಸ್ಥೆ ಇದೆ, ಕಾರ್ಯಕರ್ತರೂ ಇದ್ದಾರೆ ಆದರೆ ಕಚೇರಿಯ ಅಭಾವವಿತ್ತು ಅದು ಇಂದು ಈಡೇರಿದೆ ಈ ನಿಟ್ಟಿನಲ್ಲಿ ಸಮಸ್ತ ಜಂಇಯ್ಯತುಲ್ ಉಲಮಾ, ಜಂಇಯ್ಯತುಲ್ ಮುಅಲ್ಲಿಮೀನ್, ಎಸ್ಕೆಎಸ್ಸೆಸ್ಸೆಫ್ ಒಟ್ಟಾಗಿ ಕಾರ್ಯಾಚರಿಸಬೇಕು ಆ ಮೂಲಕ ತಾಲೂಕಿನ ಶಿಕ್ಷಣ ಸಂಸ್ಥೆಗಳನ್ನೂ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು
‘ಗಾಂಜಾ’ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಲಿ-ಎಸ್.ಬಿ ದಾರಿಮಿ
ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ ಮಾತನಾಡಿ ಸಮುದಾಯದ ಕೆಲವು ಯುವಕರು ಇತ್ತೀಚಿನ ದಿನಗಳಲ್ಲಿ ಗಾಂಜಾ ಮೊದಲಾದ ಅಮಲುಯುಕ್ತ ಪದಾರ್ಥಗಳ ದಾಸರಾಗಿ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ದುರಂತವಾಗಿದ್ದು, ಇದರಿಂದಾಗಿ ಇಡೀ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳಲ್ಲಿ ಈ ಬಗ್ಗೆ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿದೆ ಎಸ್ಕೆಎಸ್ಸೆಸ್ಸೆಫ್ ಮುಂಚೂಣಿಯಲ್ಲಿ ಈ ಕೆಲಸ ಮಾಡಬೇಕಿದೆ ಎಂದರು.
ಕೂರ್ನಡ್ಕ ಪೀರ್ ಮೊಹಲ್ಲಾ ಖತೀಬ್ ಅಬೂಬಕ್ಕರ್ ಸಿದ್ದಿಕ್ ಜಲಾಲಿ, ಸಾಲ್ಮರ ಖತೀಬ್ ಉಮ್ಮರ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಸಂಶುಲ್ ಉಲಮಾ ಸೋಶಿಯಲ್ ಟ್ರಸ್ಟ್ ಚೇರ್‌ಮೇನ್ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಪರ್ಲಡ್ಕ ಖತೀಬ್ ಮುಹಮ್ಮದಲಿ ದಾರಿಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಲವಾರು ಮಂದಿ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು. ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ವಲಯ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಬಿರ್ ಫೈಝಿ ಬನಾರಿ ವಂದಿಸಿದರು.







