ಕೊಟ್ಟಾರಚೌಕಿ: ಅಕ್ರಮ ಸಂಬಂಧದ ಶಂಕೆ; ಪತ್ನಿಯನ್ನು ಕಡಿದು ಕೊಂದ ಪತಿ
ಮಂಗಳೂರು, ಆ. 19: ಅಕ್ರಮ ಸಂಬಂಧವಿದೆಯೆಂಬ ಸಂಶಯದಿಂದ ಟೆಕ್ಕಿ ಮಹಿಳೆಯನ್ನು ಆಕೆಯ ಪತಿ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮಡಿಕೇರಿಯ ಸಿದ್ಧಾಪುರ ಮೂಲದ ಬ್ಲಾಸಂ ಲೋಬೋ (31) ಕೊಲೆಗೀಡಾಗಿರುವ ಮಹಿಳೆ.
ಆಕೆಯ ಪತಿ ವಿಲಿಯಂ ಲೋಬೋ (35) ಕೊಲೆಗೈದ ಆರೋಪಿ. ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.ವಿಲಿಯಂ ಲೋಬೋ ಮತ್ತು ಬ್ಲಾಸಂ ಲೋಬೋ ಮೂಲತಃ ಮಡಿಕೇರಿಯವರು. ನಾಲ್ಕುವರೆ ವರ್ಷದ ಹಿಂದೆ ಇವರಿಗೆ ಮದುವೆಯಾಗಿತ್ತು. ದಂಪತಿಗೆ ಮೂರುವರೆ ವರ್ಷದ ಮಗುವಿದೆ.
ಬ್ಲೊಸಂ ನಗರದ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೊಟ್ಟಾರ ಚೌಕಿಯ ಬಾಡಿಗೆ ಮನೆಯಲ್ಲಿ ಮಗುವಿನೊಂದಿಗೆ ವಾಸವಾಗಿದ್ದರು. ವಿಲಿಯಂ ಲೋಬೊ ಬೆಂಗಳೂರಿನಲ್ಲಿ ಉಬೆರ್ ಆನ್ಲೈನ್ ಬಾಡಿಗೆ ಕಾರು ಚಾಲಕನಾಗಿದ್ದ. ವಾರಕ್ಕೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದ ವಿಲಿಯಂ, ಹೆಂಡತಿಯ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ. ಅಲ್ಲದೆ, ಇದೇ ವಿಚಾರದಲ್ಲಿ ಮನೆಯಲ್ಲಿ ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಕೊಟ್ಟಾರಚೌಕಿಗೆ ಬಂದಿದ್ದ ವಿಲಿಯಂ ಮಗುವನ್ನು ಬೆಂಗಳೂರಿಗೆ ಕರೆದೊಯ್ದು ಅಣ್ಣನ ಮನೆಯಲ್ಲಿ ನಿಲ್ಲಿಸಿದ್ದ. ಮತ್ತೆ ಶುಕ್ರವಾರ ರಿಕ್ಷಾದಲ್ಲಿ ಮನೆಗೆ ಕತ್ತಿ ಹಿಡಿದುಕೊಂಡು ಬಂದಿದ್ದ. ರಿಕ್ಷಾ ಚಾಲಕನನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿ ಈಗ ಬರುವುದಾಗಿ ತಿಳಿಸಿ ಮನೆಗೆ ಹೋಗಿದ್ದ. ಆಗ ಪತ್ನಿ ಮಗು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಅವರ ನಡುವೆ ಜಗಳ ಉಂಟಾಗಿದ್ದು, ಜಗಳವು ವಿಕೋಪಕ್ಕೆ ತಿರುಗಿ ವಿಲಿಯಂ ಸಿಟ್ಟಿನಿಂದ ಪತ್ನಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಬಂದ ರಿಕ್ಷಾದಲ್ಲೇ ಉರ್ವ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿದ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಲೆಯಾದ ಬ್ಲೋಸಂ ಅವರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.