ಎಸ್‍ಪಿ ವಾಹನಕ್ಕೆ ಟ್ರಾಫಿಕ್ ಜಾಮ್ ಬಿಸಿ : ರಸ್ತೆಗಳಿದು ವಾಹನ ಸಂಚಾರ ಸುಗಮಗೊಳಿಸಿದ ರಾಜೇಂದ್ರ ಪ್ರಸಾದ್

ಮಡಿಕೇರಿ ಆ.19 : ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ. ಈ ವಾಹನದಟ್ಟಣೆಯಿಂದ ಚಾಲಕರು ನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ. ಆದರೆ ಇಂದು ಸ್ವತ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಅವರೇ ವಾಹನಗಳ ಸಾಲಿನಲ್ಲಿ ಸಿಲುಕಿ ಕಿರಿಕಿರಿ ಅನುಭವಿಸಬೇಕಾಯಿತು. ಅಲ್ಲದೆ ತಮ್ಮ ವಾಹನದಿಂದ ಕೆಳಗಿಳಿದು ಇತರ ವಾಹನಗಳ ಸಂಚಾರವನ್ನು ಸುಗಮಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭವಿದ್ದ ಕಾರಣ ಪಕ್ಷದ ನಾಯಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಗಮಿಸಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿದ ಕಾರಣ ಭಾರೀ ವಾಹನಗಳು ಈ ಮಾರ್ಗವಾಗಿ ಬರುವ ಸಂದರ್ಭ ವಾಹನದಟ್ಟಣೆ ಹೆಚ್ಚಾಗುತ್ತಿತ್ತು. ಮಧ್ಯಾಹ್ನ ಈ ಮಾರ್ಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಇಲಾಖಾ ವಾಹನದಲ್ಲಿ ಕಚೇರಿಗೆ ತೆರಳುತ್ತಿದ್ದರು. ಆದರೆ ಮೈಲುಗಟ್ಟಲೆ ದೂರ ಸಾಲುಗಟ್ಟಿ ನಿಂತಿದ್ದ ವಾಹನಗಳ ಸಾಲಿನಲ್ಲಿ ಎಸ್‍ಪಿ ಅವರ ವಾಹನವೂ ಸಿಲುಕಿಕೊಂಡಿತು.
ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಇಲ್ಲದಿರುವುದನ್ನು ಗಮನಿಸಿದ ರಾಜೇಂದ್ರಪ್ರಸಾದ್ ಅವರು ಸಧ್ಯಕ್ಕೆ ವಾಹನದಟ್ಡಣೆಯಿಂದ ಮುಕ್ತಿ ಸಿಗಲಾರದು ಎಂದು ಅರಿತು ತಮ್ಮ ವಾಹನದಿಂದ ಕೆಳಗಿಳಿದು ಸ್ವತ: ತಾವೇ ಸಂಚಾರಿ ಪೊಲೀಸರ ಕಾರ್ಯವನ್ನು ನಿಭಾಯಿಸಿದರು. ರಸ್ತೆಯುದ್ದಕ್ಕೂ ನಿಂತಿದ್ದ ವಾಹನಗಳ ಸುಗಮ ಸಂಚಾರಕ್ಕೆ ಕೆಲವೇ ನಿಮಿಷಗಳಲ್ಲಿ ಅನುವು ಮಾಡಿಕೊಟ್ಟರು. ಗಂಟೆಗಟ್ಟಲೆ ಕಾದು ನಿಂತಿದ್ದ ವಾಹನ ಚಾಲಕರು ನಿಟ್ಟುಸಿರು ಬಿಟ್ಟರು, ಅಲ್ಲದೆ ಎಸ್‍ಪಿ ಸಾಹೇಬ್ರಿಗೆ ಸೆಲ್ಯುಟ್ ಮಾಡಿದರು.
ಸಕಾಲದಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿ ತೆರಳಿದ ನಂತರ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಕರ್ತವ್ಯ ನಿರತರಾದಂತೆ ತೋರ್ಪಡಿಸಿಕೊಂಡರು.
ಕಾಂಗ್ರೆಸ್ ಕಚೇರಿ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಉಂಟಾದ ವಾಹನದಟ್ಟಣೆಯಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್‍ಪಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು ಉದ್ದೇಶಿತ ಯೋಜನೆ ನೂತನ ಖಾಸಗಿ ಬಸ್ ನಿಲ್ದಾಣ ಈ ಭಾಗದಲ್ಲಿ ಕಾರ್ಯಾರಂಭಗೊಂಡರೆ ವಾಹನಗಳ ಸಂಚಾರದ ಗತಿ ಏನು ಎಂದು ಚರ್ಚಿಸಿಕೊಂಡರು.







