ಕುಬ್ಜರ ಒಲಿಂಪಿಕ್ಸ್ ಸ್ಪರ್ಧಾರ್ಥಿಗಳ ಸಹಾಯಧನ ಬಿಡುಗಡೆಗೆ ಆಗ್ರಹ
ಬೆಂಗಳೂರು, ಆ.19: ಇತ್ತೀಚಿಗೆ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಭಾಗವಹಿಸಿದ್ದ ಸ್ಪರ್ಧಾರ್ಥಿಗಳಿಗೆ ಸರಕಾರದಿಂದ ನೀಡಬೇಕಾದ ಸಹಾಯ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸ್ಪರ್ಧಾರ್ಥಿಗಳು ಆಗ್ರಹಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪರ್ಧಾರ್ಥಿಗಳು, ಕುಬ್ಜರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಲುವಾಗಿ ಸರಕಾರ ಹಣಕಾಸು ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಿತ್ತು. ಅದರ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾ ಸಚಿವರು ಹಾಗೂ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ವಿಶ್ವ ಮಟ್ಟದಲ್ಲಿ ನಡೆದ ಹಲವು ಕ್ರೀಡಾ ಕೂಟಗಳಲ್ಲಿ ಭಾಗವಹಿಸುವ ವೇಳೆ ಸರಕಾರ ಪ್ರೋತ್ಸಾಹ ನೀಡಿದೆ. ಆದರೆ, ಈ ಬಾರಿ ಅಧಿಕಾರಿಗಳ ನಿರ್ಲಕ್ಷದಿಂದ ಸರಿಯಾದ ಸಮಯಕ್ಕೆ ಹಣಕಾಸು ಸಿಗಲಿಲ್ಲ. ಆದುದರಿಂದ ಮನೆಯಲ್ಲಿರುವ ಒಡವೆಗಳನ್ನು ಅಡವಿಟ್ಟು, ಸಾಲ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿದ್ದೇವೆ ಎಂದು ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದ ರಾಜಣ್ಣ ಹೇಳಿದರು.
ಸ್ಪರ್ಧಾರ್ಥಿ ನಾಗೇಶ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸಹಾಯಧನ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಆದರೆ, ಮೂರು-ನಾಲ್ಕು ದಿನಗಳ ಬಾಕಿ ಇರುವಾಗ ಹಣ ನೀಡಲು ಆಗಲ್ಲ ಎಂದುಬಿಟ್ಟರು. ನಾವೆಲ್ಲ ಸಾಲ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ. ಆದುದರಿಂದ ಸರಕಾರ ಕೂಡಲೇ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಂಡದ ತರಬೇತಿದಾರ ಶಿವಾನಂದ ಮಾತನಾಡಿ, ಭಾರತದಿಂದ ಕೆನಡಾಗೆ ತಲುಪಲು ಸಾಧ್ಯವಾಗದ ಸ್ಥಿತಿಯಲ್ಲಿ ತಂಡದ ಸದಸ್ಯರಿದ್ದರು. ಕೆನಡಾದ ಕನ್ನಡ, ತೆಲುಗು, ತಮಿಳು ಸಂಘಗಳು ನಮ್ಮ ಬೆಂಬಲಕ್ಕೆ ಬಾರದೇ ಇದ್ದಿದ್ದರೆ ನಾವು ವಿಮಾನ ನಿಲ್ದಾಣದಲ್ಲಿ ಕಾಲ ಕಳೆಯಬೇಕಾಗಿತ್ತು ಎಂದು ಹೇಳಿದರು.
ರಾಜ್ಯದಿಂದ ಭಾಗವಹಿಸಿದ್ದ ಸಿ.ವಿ.ರಾಜಣ್ಣ ಬ್ಯಾಂಡ್ಮಿಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಹಾಗೂ 100 ಮತ್ತು 200 ಮೀಟರ್ ಓಟದಲ್ಲಿ 2 ಚಿನ್ನದ ಪದಕ, ಎಂ.ಪ್ರಕಾಶ್ ಬೋಸಿಯಾ ಚಿನ್ನದ ಪದಕ, ದೀವಪ್ಪ ಮೋರೆ 100 ಮೀ ಓಟದಲ್ಲಿ ಚಿನ್ನ ಹಾಗೂ 200 ಮೀ ಓಟದಲ್ಲಿ ಬೆಳ್ಳಿ ಪದಕ, ಎನ್.ನಾಗೇಶ್ ಚಿನ್ನದ ಹಾಗೂ ಬೆಳ್ಳಿ ಪದಕ, ಶಾಂತಕುಮಾರ್-ಬೆಳ್ಳಿ ಪದಕ, ರೇಣುಕುಮಾರ್-ಚಿನ್ನ ಮತ್ತು ಬೆಳ್ಳಿ ಪದಕ ಹಾಗೂ ಸಿಮ್ರಾನ್ ಚಿನ್ನ ಮತ್ತು 2 ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಅವರು ವಿವರಿಸಿದರು.







