ಕಾಲುವೆಗಳಿಗೆ ತಡೆಗೋಡೆಗಳು ನಿರ್ಮಿಸುವಂತೆ ಸಚಿವ ಜಾರ್ಜ್ ಸೂಚನೆ

ಬೆಂಗಳೂರು, ಆ.19: ನಗರದಲ್ಲಿ ತಡೆಗೋಡೆಗಳಿಲ್ಲದ ನೀರು ಕಾಲುವೆಗಳಿಗೆ ಕೂಡಲೇ ತಡೆಗೋಡೆಗಳನ್ನು ನಿರ್ಮಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮೇಯರ್ ಜಿ.ಪದ್ಮಾವತಿ, ಆಯುಕ್ತ ಮಂಜುನಾಥ ಪ್ರಸಾದ್‌ರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಜಾರ್ಜ್, ನಗರದ ಜೆಸಿ ರಸ್ತೆಯಲ್ಲಿ ಮಳೆ ನೀರು ಕಾಲುವೆ ಮೂಲಕ ಸರಾಗವಾಗಿ ಹರಿದು ಹೋಗಲು ಅಡ್ಡವಾಗಿರುವ ಕಟ್ಟಡಗಳನ್ನು ಕಾನೂನು ಪ್ರಕಾರವಾಗಿ ಕೆಡವಿ ಹಾಕುವಂತೆ ತಿಳಿಸಿದರು.
ಜೆಸಿ ರಸ್ತೆಯಲ್ಲಿನ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಮಳೆ ನೀರು ಕಾಲುವೆ ಮೇಲೆ ಕಟ್ಟಡವನ್ನು ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸಚಿವರು ಅಭಿಪ್ರಾಯಿಸಿದರು.
ಶಾಂತಿನಗರ, ಡಬಲ್ ರಸ್ತೆಯಲ್ಲಿನ ನೀರು ಕಾಲುವೆಗಳಲ್ಲಿ ಹೂಳು ತೆಗೆಯದಿದ್ದರಿಂದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೆ, ಫುಟ್‌ಪಾತ್‌ಗಳನ್ನು ಅಗೆದು, ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ ನೀರು ನುಗ್ಗಿದೆ. ಕೂಡಲೇ ನಗರದ ವಿವಿಧ ರಸ್ತೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಕೇಬಲ್‌ಗಳನ್ನು ತೆಗೆದು ಹಾಕಬೇಕು. ಜೊತೆಗೆ, ಸಂಬಂಧಪಟ್ಟ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಹೇಳಿದರು.
ವಿಲ್ಸನ್‌ಗಾರ್ಡನ್‌ನಲ್ಲಿಯೂ ಸಹ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ಚರಂಡಿಗಳಲ್ಲಿ ಹೂಳು ತೆಗೆಯದಿರುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಕೂಡಲೇ ನಗರದಾದ್ಯಂತ ಚರಂಡಿಗಳಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಜೊತೆಗೆ, ಈ ಬಾಗದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವಂತೆ ತಿಳಿಸಿದರು.
ಬಿಎಂಟಿಸಿ ಬಸ್ ಡಿಪೋಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿದ್ದನ್ನು ಪರಿಶೀಲಿಸಿದ ಸಚಿವರು, ಬಸ್ ಡಿಪೋದಲ್ಲಿ ಒಳಚರಂಡಿ ನಿರ್ಮಾಣ ಮಾಡುವ ಕುರಿತು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು.
ಕೋರಮಂಗಲ ಎಸ್‌ಟಿಪಿ ಬೆಡ್ ಪ್ರದೇಶದಲ್ಲಿ ರಾಜಕಾಲುವೆಯಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಹೂಳು ತೆಗೆಯುವ ಕಾಮಗಾರಿ ಪರಿಶೀಲನೆ ವೇಳೆ ಕಾಲುವೆ ಹಾಳು ಮಾಡಿರುವುದು ಪತ್ತೆಯಾಯಿತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ತಕ್ಷಣವೇ ತಡೆಗೋಡೆ ನಿರ್ಮಿಸುವಂತೆ ಸೂಚನೆ ನೀಡಿದರು.







