ಆ.21ಕ್ಕೆ ನಾಮಪತ್ರ ಸಲ್ಲಿಕೆ: ಸಿ.ಎಂ.ಇಬ್ರಾಹೀಂ
ಮೇಲ್ಮನೆ ಉಪ ಚುನಾವಣೆ

ಬೆಂಗಳೂರು, ಆ. 19: ಮೇಲ್ಮನೆ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಿನ್ನೆಯೇ ತಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹೀಂ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಸಮಾಲೋಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.21ರ ಸೋಮವಾರ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಪರಿಷತ್ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಜತೆ ನನ್ನದು ಹಳೆಯ ಗೆಳೆತನ. ಅವರೊಂದಿಗೆ ಯಾವುದೇ ಮನಸ್ತಾಪವಿಲ್ಲ. ಆಗಾಗ್ಗೆ ನನಗೆ ಒಳ್ಳೆಯ ಸಲಹೆಗಳನ್ನು ಕೊಡುತ್ತಿರುತ್ತಾರೆ. ಡಿಸಿಎಂ ಆಗಿದ್ದಕ್ಕಿಂತಲೂ ಈಗ ಅವರು ಸಿಎಂ ಆಗಿರುವುದರಿಂದ ಅವರಿಗೆ ಹೆಚ್ಚು ಜವಾಬ್ದಾರಿ ಇದ್ದು, ಎಲ್ಲರನ್ನೂ ತೂಗಿಸಿಕೊಂಡು ಹೋಗುವ ಹೊಣೆಗಾರಿಕೆ ಇದೆ.
ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪವಾಗಿದೆ. ಈ ಸಂದರ್ಭದಲ್ಲಿ ಯಾವುದೇ ಆಸೆ-ಆಮಿಷಗಳನ್ನು ಒಡ್ಡಿದರೂ ನಾನು ವಿಚಲಿತನಾಗಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು.
ಮಧು ಮಗಳು: ಮಧುಮಗಳು ಚೆನ್ನಾಗಿದ್ದರೆ ಮದುವೆಯಾಗಲು ಗಂಡುಗಳು ಹೆಚ್ಚು ಬರುತ್ತವೆ. ಇದರಲ್ಲಿ ವಿಶೇಷವೇನಿಲ್ಲ ಎಂದು ಜೆಡಿಎಸ್ ಸೇರುವ ಆಹ್ವಾನ ಬಂದಿದ್ದನ್ನು ಪರೋಕ್ಷವಾಗಿ ಇಬ್ರಾಹೀಂ ಇದೇ ಸಂದರ್ಭದಲ್ಲಿ ಒಪ್ಪಿಕೊಂಡರು.
ಹಿರಿಯ ಮುಖಂಡ ಸಿಎಂ ಇಬ್ರಾಹೀಂ ಅತ್ಯಂತ ಅನುಭವಿ ರಾಜಕಾರಣಿ. ಅವರಿಗೆ ಪಕ್ಷ ಸೂಕ್ತ ಜವಾಬ್ದಾರಿ ನೀಡಬೇಕು ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿತ್ತು. ಅದನ್ನು ಗೌರವಿಸಿ ಕಾಂಗ್ರೆಸ್ ಅವರಿಗೆ ಮೇಲ್ಮನೆ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ಅವಕಾಶ ನೀಡಿದೆ.
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ







