ಸಾವನ್ನೇ ನಿರೀಕ್ಷಿಸುತ್ತಿರುವ ಈ ಹುಡುಗ ಹಗಲಲ್ಲಿ ಕೇವಲ ಒಂದು ಗಂಟೆ ಮಾತ್ರ ನಿದ್ರಿಸಬಲ್ಲ!

ಹೊಸದಿಲ್ಲಿ,ಆ.19: "ನನಗೆ ನಿಧಾನವಾಗಿ ಸಾಯುತ್ತಿದ್ದೇನೆ ಎಂದು ಅನಿಸುತ್ತಿದೆ" ಎಂದು ಅಸ್ಸಾಂನ ಗ್ರಾಮೀಣ ಪ್ರದೇಶದ ವಿಕಾಸ್ ಹಝಾರಿಕಾ ಹೇಳುತ್ತಾನೆ. ಅರುವತ್ತೊಂದು ಕೆಜಿ ಭಾರದ ಈತನಿಗೆ ನಡೆದಾಡಲು, ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ವಿಕಾಸ್‌ನ ಹೊಟ್ಟೆ ಉಬ್ಬಿಕೊಂಡಿದ್ದು ಎಷ್ಟೇ ಚಿಕಿತ್ಸೆ ಮಾಡಿಸಿದರೂ ಯಾವ ಪ್ರಯೋಜನವೂ ಆಗಿಲ್ಲ.
ಕಳೆದ ಐದು ವರ್ಷಗಳಿಂದ ಕಂಜೆಸ್ಟಿವ್ ಹೆಪಟೊಮೆಗೆಲಿ ಎನ್ನುವ ರೋಗದಿಂದ ವಿಕಾಸ್ ಬಳಲುತ್ತಿದ್ದಾನೆ. ಹಗಲಿನ ವೇಳೆಯಲ್ಲಿ ಒಂದು ಗಂಟೆ,ಅಥವಾ ಅರ್ಧಗಂಟೆ ನಿದ್ದೆಮಾಡಲು ಮಾತ್ರ ಆತನಿಗೆ ಸಾಧ್ಯವಿದೆ. ವಿಕಾಸ್ ಒಬ್ಬ ಉತ್ತಮ ಫುಟ್‌ಬಾಲ್ ಆಟಗಾರನಾಗಿದ್ದ. ಒಂದು ದಿವಸ ಆಡುತ್ತಿದ್ದಾಗ ಹೊಟ್ಟೆ ನೋವು ಆಗಿ ಮೈದಾನದಲ್ಲಿಯೇ ಬಿದ್ದು ಬಿಟ್ಟಿದ್ದ. ನಂತರ ಅವನಿಗೆ ಗಂಭೀರ ರೋಗ ತಗಲಿದೆ ಎನ್ನುವುದು ವೈದ್ಯಕೀಯ ತಪಾಸಣೆಯಲ್ಲಿ ತಿಳಿಯಿತು.
ಈ ರೋಗ ನಿವಾರಣೆಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಸುಮಾರು ಆರುಲಕ್ಷ ರೂಪಾಯಿ ಬೇಕಾಗಿದೆ. ವಿಕಾಸ್‌ನ ತಂದೆ ಕೂಲಿ ಕೆಲಸಮಾಡಿ ಕುಟುಂಬದ ಜೀವನ ಸಾಗಿಸುವ ವ್ಯಕ್ತಿ. ಇಷ್ಟು ದೊಡ್ಡ ಮೊತ್ತವನ್ನು ಅವರು ಎಲ್ಲಿಂದ ತಂದಾರು?. ತಿಂಗಳಿಗೆ ಐದು ಸಾವಿರೂಪಾಯಿಯಲ್ಲಿ ಮನೆಯ ಖರ್ಚನ್ನು ಅವರು ನಿಭಾಯಿಸಬೇಕಾಗಿದೆ. ಹೀಗಿರುವಾಗ ತನ್ನ ಮಗನ ರೋಗಕ್ಕೆ ಮದ್ದು ಮಾಡಲು ಅವರಿಗೆ ಸಾಧ್ಯವಿಲ್ಲ.
ಈಗ ವಿಕಾಸ್ ತನ್ನ ಎಲ್ಲ ನಿರೀಕ್ಷೆಯನ್ನು ಕಳಕೊಂಡಿದ್ದಾನೆ. " ಹಲವು ವರ್ಷ ಆಯಿತು. ಮಲಗಲು ಆಗವುದಿಲ್ಲ. ನಡೆದಾಡಲು ಆಗುವುದಿಲ್ಲ. ಇಡೀ ದಿವಸ ಒಂದು ಒರಗು ಕುರ್ಚಿಯಲ್ಲಿ ಕುಳಿತು ಕಳೆಯಬೇಕಾಗಿದೆ. ಈಗಲೇ ಚಿಕಿತ್ಸೆ ತಡವಾಗಿದೆ. ಇನ್ನು ಗುಣಮುಖನಾಗುವ ಯಾವ ನಿರೀಕ್ಷೆಯೂ ಇಲ್ಲ" ಎಂದು ವಿಕಾಸ್ ಹೇಳುತ್ತಿದ್ದಾನೆ.







