ಬಿಜೆಪಿಯವರದ್ದು ದ್ವೇಷದ ರಾಜಕಾರಣ: ರಾಮಲಿಂಗಾರೆಡ್ಡಿ

ಬೆಂಗಳೂರು, ಆ.19: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಪ್ರಕರಣ ದಾಖಲಾಗಿರುವುದು ದ್ವೇಷದ ರಾಜಕಾರಣ ವಾದರೆ, ಸಚಿವರಾದ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಏನೆಂದು ಕರೆಯಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಶನಿವಾರ ಕೆ.ಆರ್.ಪುರದ ಕಸ್ತೂರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಉದ್ಯಮಿಗಳು, ಅಕ್ರಮ ಎಲ್ಲೂ ಮಾಡಿಲ್ಲ. ಸಮರ್ಪಕವಾಗಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಅಕ್ರಮಗಳಿದ್ದರೆ ಕ್ರಮ ಕೈಗೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಬಿಜೆಪಿ ಹೇಳುವುದು ಒಂದು ಮಾಡುವುದು ಇನ್ನೊಂದು, ಜನರನ್ನು ಸುಳ್ಳು ಭರವಸೆಗಳ ಮೂಲಕ ದಾರಿತಪ್ಪಿಸುವುದು ಬಿಜೆಪಿ ನಡೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆಂದು ಜನರಿಗೆ ವಂಚನೆ ಮಾಡಿದ್ದಾರೆ. ಬ್ರಿಟಿಷರ ಜೊತೆ ಕೈ ಜೋಡಿಸಿ ಸರಕಾರ ರಚನೆ ಮಾಡಿದವರು ಬಿಜೆಪಿಯವರು ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.





