ಅಂತರ್ಜಾಲದ ಮೂಲಕ ಕೃತಿ ರಚಿಸುವವರ ಸಂಖ್ಯೆ ಹೆಚ್ಚಳ: ಪ್ರೊ.ಮಲ್ಲೇಪುರಂ ವೆಂಕಟೇಶ್
ಬೆಂಗಳೂರು, ಆ.19: ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಕೃತಿಗಳನ್ನು ರಚಿಸುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಭಾರತೀಯ ವಿದ್ಯಾ ಭವನದ ಖಿಂಚಾ ಸಭಾಂಗಣದಲ್ಲಿ ಭವತಾರಿಣಿ ಪ್ರಕಾಶನ ಆಯೋಜಿಸಿದ್ದ ಡಾ.ಎಸ್.ಗುರುಮೂರ್ತಿ ರಚಿಸಿರುವ ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶಾಭಿಮಾನ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಡಾ.ಎಸ್.ಗುರುಮೂರ್ತಿ ಅವರು ರಾಜಸ್ಥಾನಕ್ಕೆ ಸ್ವತಃ ಹೋಗಿ ಮಹಾರಾಣಾ ಪ್ರತಾಪ್ ಅವರ ಮಾಹಿತಿಯನ್ನು ಕಲೆ ಹಾಕಿ ಉತ್ತಮವಾದ ಕೃತಿಯನ್ನು ರಚಿಸಿದ್ದಾರೆ. ಆದರೆ, ಇನ್ನು ಕೆಲವರು ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಕೃತಿ ರಚಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ, ಅಂತರ್ಜಾಲದ ಮಾಹಿತಿ ಸಂಗ್ರಹಕ್ಕೂ ಹಾಗೂ ಸ್ವತಃ ಮಾಹಿತಿ ಕಲೆ ಹಾಕಿ ಕೃತಿ ರಚಿಸುವುದಕ್ಕೂ ಅಜಗಜಾಂತರ ವ್ಯ್ಯಾಸವಿದೆ ಎಂದು ಅಭಿಪ್ರಾಯಿಸಿದರು.
ರಾಜ್ಯಗಳ ನಡುವೆ ಸಮನ್ವಯತೆ ಬೆಳೆಸಲು ಮಹಾರಾಣಾ ಪ್ರತಾಪ್ ಕೃತಿ ಅವಶ್ಯಕವಾಗಿದ್ದು, ಈ ಕೃತಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೂ ಭಾಷಾಂತರವಾಗಲಿ ಎಂದು ಆಶಿಸಿದರು.
ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಮಾತನಾಡಿ, ಮಹಾರಾಣಾ ಪ್ರತಾಪ್ ಕೃತಿಯಲ್ಲಿ ಪ್ರತಾಪ್ ಮಾಹಿತಿ ಸೇರಿಇತರೆ ಮಾಹಿತಿಗಳಿದ್ದು, ಈ ಕೃತಿಯನ್ನು ಆಧಾರವಾಗಿಟ್ಟುಕೊಂಡು ಪ್ರತಾಪ್ ಬಗ್ಗೆ ಸಿನಿಮಾ ತೆಗೆಯಬಹುದು ಎಂದು ಹೇಳಿದರು.
ಗುರುಮೂರ್ತಿ ಅವರು ನಿವೃತ್ತಿಯಿಂದ ಬರೆಹದ ಪ್ರವೃತ್ತಿಗೆ ಬಂದಿದ್ದು, ಇವರು ಇನಷ್ಟು ಕೃತಿಗಳನ್ನು ರಚಿಸುವಂತಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ದೇಶದ ಮೇಲೆ ಆಕ್ರಮಣ ಮಾಡಿದ ಮೊಘಲ್ ದೊರೆ ಅಕ್ಬರ್, ಗ್ರೀಸ್ ದೇಶದ ದೊರೆ ಅಲೆಕ್ಸಾಂಡರ್‌ನನ್ನು ದಿ ಗ್ರೇಟ್ ಎಂದು ಹೊಗಳುವ ಸಂಸ್ಕೃತಿ ನಮ್ಮಲ್ಲಿ ಬೆಳೆದಿದೆ. ಈ ಸಂಸ್ಕೃತಿ ಬದಲಾಗಬೇಕಾದರೆ ನಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ನಮ್ಮ ಹಿರಿಯರ ಬಗ್ಗೆ ತಿಳಿಸಿಕೊಡುವ ಅವಶ್ಯಕತೆ ಇದೇ ಎಂದು ಹೇಳಿದರು.
ಪಠ್ಯ ಪುಸ್ತಕದಲ್ಲಿ ನಮ್ಮ ಸೈನಿಕರ ಬಗ್ಗೆ ಅಗೌರವ ತೋರಿಸಿ ಆಮೇಲೆ ತಪ್ಪಾಗಿದೆ, ಆ ತಪ್ಪನ್ನು ಸರಿಪಡಿಸಲಾಗುವುದು ಎಂದು, ಬರಗೂರು ರಾಮಚಂದ್ರಪ್ಪನವರ ಹೆಸರು ಹೇಳದೆ ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, ಪತ್ರಕರ್ತ ರಾಜೇಂದ್ರ ಶೇಖರ್‌ವ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.







