ಉದ್ಯೋಗ ಸೃಷ್ಟಿಸದಿದ್ದರೆ ಸಾಮೂಹಿಕ ಮತ ಬಹಿಷ್ಕಾರದ ಎಚ್ಚರಿಕೆ
ಪಕ್ಷಗಳ ಕಚೇರಿಯಲ್ಲಿ ಟಾರ್ಚ್‌ಗಳನ್ನು ಹಿಡಿದು ಉದ್ಯೋಗ ಹುಡುಕಿದ ನಿರುದ್ಯೋಗಿ ಯುವಕರು

ಬೆಂಗಳೂರು, ಆ. 19: ಮುಂದಿನ ಐದು ವರ್ಷದಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಕಚೇರಿಗಳ ಮುಂದೆ ಇಂದು ನಿರುದ್ಯೋಗಿ ಯುವಕರು ಟಾರ್ಚ್‌ಗಳನ್ನು ಹಿಡಿದು ಉದ್ಯೋಗವನ್ನು ಹುಡುಕುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮೊದಲಿಗೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಸದಸ್ಯರು ಜಮಾಯಿಸಿ ನಿರುದ್ಯೋಗ ಸಮಸ್ಯೆಯನ್ನು ಬಿಂಬಿಸುವ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು.
ಸಂಘಟನೆಯ ಸದಸ್ಯ ಸರೋವರ್ ಸೂರ್ಯದೇವ್ ಮಾತನಾಡಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗ್ರಾದ ಶಂಖನಾದ ರ್ಯಾಲಿಯಲ್ಲಿ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಕಲ್ಪಿಸಲಾಗುವುದು ಎಂದು ಯುವ ಜನತೆಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಹಾಗೆಯೇ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿಸುವ ಕುರಿತು ಪ್ರಕಟಿಸಿದ್ದರು. ಆದರೆ ಮೂರುವರೆ ವರ್ಷ ಕಳೆದರೂ ತಮ್ಮ ಮಾತನ್ನು ಉಳಿಸಿಕೊಳ್ಳಲು ಪಕ್ಷಗಳು ವಿಫಲವಾಗಿವೆ ಎಂದು ಕಿಡಿಕಾರಿದರು.
ಇದು ಪ್ರತಿಭಟನೆಯಲ್ಲ.ಪಕ್ಷಗಳ ಕಚೇರಿಗಳಲ್ಲಿ ಕಳೆದು ಹೋಗಿರುವ 3.5 ಕೋಟಿ ಉದ್ಯೋಗಗಳನ್ನು ಹುಡುಕಲು ವಿವಿಧ ಸಂಘಟನೆಗಳ ಕಾರ್ಯಕರ್ತರು ಜೊತೆಗೂಡಿ ಬಂದಿದ್ದೇವೆ. ಉದ್ಯೋಗ ಸೃಷ್ಟಿ ಕುರಿತು ಕೂಡಲೆ ವಿಶೇಷ ಅಧಿವೇಶನ ಕರೆಯಬೇಕು. ಇನ್ನು ಒಂದು ವರ್ಷದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗ ಸೃಷ್ಟಿಸದಿದ್ದರೆ ಸಾಮೂಹಿಕವಾಗಿ ಮತ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಎಂಬುವುದು ದೇಶದ ಅತಿದೊಡ್ಡ ಪಿಡುಗು.ಎಲ್ಲರಿಗೂ ಸರಕಾರದಿಂದ ಉದ್ಯೋಗ ಕಲ್ಪಿಸಲು ಸಾಧ್ಯವಾಗುವುದಿಲ್ಲ. ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ರಾಜ್ಯ ಸರಕಾರ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಸರಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲಾಗುತ್ತಿದೆ. ನಿಮ್ಮ ಬೇಡಿಕೆ ಕುರಿತು ಸರಕಾರದ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಜೆಡಿಎಸ್ ಕಚೇರಿಗೆ ತೆರಳಿದ ಸದಸ್ಯರು ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಬಳಿಕ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಕಂಠೇಗೌಡ ಮತ್ತು ರಮೇಶ್ ಬಾಬು ಮಾತನಾಡಿ, ಪಕ್ಷದ ಪರವಾಗಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಈ ಕುರಿತು ಮುಂದಿನ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಕಚೇರಿ ಸಿಬ್ಬಂದಿ ಧಮ್ಕಿ: ಕೊಟ್ಟ ಮಾತನ್ನು ಉಳಿಸಿಕೊಂಡು ವರ್ಷಕ್ಕೆ ಕನಿಷ್ಠ ಒಂದು ಲಕ್ಷ ಉದ್ಯೋಗ ಸೃಷ್ಟಿಸಬೇಕು ಎಂದು ಮನವಿ ಸಲ್ಲಿಸಲು ತೆರಳಿದ್ದ ಸಂಘಟನೆಯ ಸದಸ್ಯರಿಗೆ ಬಿಜೆಪಿ ಕಚೇರಿಯ ಸಿಬ್ಬಂದಿಗಳು ಧಮ್ಕಿ ಹಾಕಿದ ಪ್ರಸಂಗವೂ ನಡೆದಿದೆ. ಪೊಲೀಸರಿಗೆ ಬಂಧಿಸಲು ಹೇಳಲಾಗುವುದು ಎಂದು ಹೆದರಿಸಿದರು ಎಂದು ಸಂಘಟನೆಯ ಸದಸ್ಯ ನರಸಿಂಹಮೂರ್ತಿ ದೂರಿದರು.
ನಾವು ಪಕ್ಷದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದೇವೆ ವಿನಃ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಲು, ಘೋಷಣೆಗಳನ್ನು ಕೂಗಲು ಬಂದಿಲ್ಲ. ಕೂಡಲೆ ಪಕ್ಷದ ಮುಖಂಡರನ್ನು ಭೇಟಿಯಾಗಬೇಕು ಇಲ್ಲವೇ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲಿ ಎಂದು ಮನವಿ ಮಾಡಿದರು ಸಿಬ್ಬಂದಿ ಇದಾವುದಕ್ಕೂ ಕಿವಿಗೊಡಲಿಲ್ಲ.
ಇತ್ತ ಬಿಜೆಪಿಯ ಮುಖಂಡರು ಸ್ಥಳಕ್ಕೆ ಆಗಮಿಸುವರೆಗೂ ಸ್ಥಳಬಿಟ್ಟು ಹೊಗುವುದಿಲ್ಲ ಎಂದು ಪಟ್ಟು ಹಿಡಿದರು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ತಮ್ಮ ಹಕ್ಕೊತ್ತಾಯ ಸಲ್ಲಿಸಲು ರಸ್ತೆಯ ಮಧ್ಯೆ ಗಂಟೆಗಟ್ಟಲೆ ಕಾದು ಸುಸ್ತಾದರು. ಮಳೆಯಲ್ಲಿ ನೆನಯುತ್ತಿದ್ದ ದೃಶ್ಯವನ್ನು ಕಂಡು ಕಾಣದಂತೆ ಬಿಜೆಪಿ ಕಚೇರಿಯ ಸಿಬ್ಬಂದಿ ವರ್ತಿಸಿದರು.







