ಬಿಹಾರದಲ್ಲಿ ನೆರೆ: ಸಾವಿನ ಸಂಖ್ಯೆ 153ಕ್ಕೇರಿಕೆ; ಕೋಟಿಗೂ ಮಿಕ್ಕಿ ಸಂತ್ರಸ್ತರು

ಪಾಟ್ನಾ, ಆ. 19: ಬಿಹಾರದಲ್ಲಿ ನೆರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಸಾವಿನ ಸಂಖ್ಯೆ 153ಕ್ಕೆ ಏರಿಕೆಯಾಗಿದೆ ಹಾಗೂ 1 ಕೋಟಿಗೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಗಂಗಾ, ಬುರ್ಹಿ, ಗಂಡ್ಹಕ್, ಭೂತಾಹಿ ಬಾಲನ್ ಹಾಗೂ ಲಾಲೋಕೇಯಾ ಹಾಗೂ ಇತರ 7 ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕೆ ತಲುಪಿವೆ. ನೇಪಾಳ ಹಾಗೂ ರಾಜ್ಯದ ಉತ್ತರ ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿದೆ. 17 ಜಿಲ್ಲೆಗಳು ಜಲಾವೃತವಾಗಿವೆ. ಜಿಲ್ಲೆಗಳಾದ ಅರಾರಿಯಾದಲ್ಲಿ 30, ಪಶ್ಚಿಮ ಚಂಪಾರಣ್ 23, ಸೀತಾಮರ್ಹಿ 13, ಮಧುಬನಿ 8, ಕಾಥಿಹಾರ್‌ನಲ್ಲಿ 7 ಸಾವು ಸಂಭವಿಸಿದೆ. ಕಿಷನ್‌ಗಂಜ್, ಪೂರ್ವ ಚಂಪಾರಣ್, ಸುಪುವಾಲ್‌ನಲ್ಲಿ ತಲಾ 11, ಪುರ್ನಿಯಾ ಹಾಗೂ ಮಾಧೇಪುರದಲ್ಲಿ ತಲಾ 9 ಸಾವು ಸಂಭವಿಸಿದೆ.
ದರ್ಭಾಂಗ್, ಗೋಪಾಲ್‌ಗಂಜ್ ಹಾಗೂ ಸಹಾರ್ಸಾದಲ್ಲಿ ತಲಾ 4, ಖಗರಿಯಾ ಹಾಗೂ ಶಿಯೋಹಾರ್‌ನಲ್ಲಿ ತಲಾ 3, ಸರನ್‌ನಲ್ಲಿ 2 ಹಾಗೂ ಮುಝಫ್ಫರ್‌ಪುರದಲ್ಲಿ 1 ಸಾವು ಸಂಭವಿಸಿದೆ ಎಂದು ವಿಕೋಪ ನಿರ್ವಹಣಾ ಇಲಾಖೆಯ ವಿಶೇಷ ಕಾರ್ಯದರ್ಶಿ ಅನಿರುದ್ಧ್ ಕುಮಾರ್ ಹೇಳಿದ್ದಾರೆ. 17 ಜಿಲ್ಲೆಗಳು ಹಾಗೂ 1688 ಪಂಚಾಯತ್‌ಗಳು ನೆರೆ ಪೀಡಿತವಾಗಿದ್ದು, 1 ಕೋಟಿಗೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಿಹಾರದ 6 ಜಿಲ್ಲೆಗಳಲ್ಲಿ ಸೇನೆ ಹಾಗೂ ಎಂಜಿನಿಯರ್ ಕ್ಷಿಪ್ರ ಪಡೆ ನಿಯೋಜಿಸಲಾಗಿದ್ದು, ನೆರೆ ಪೀಡಿತ ಪ್ರದೇಶದ 300ಕ್ಕೂ ಅಧಿಕ ಸಂತ್ರಸ್ತರನ್ನು ರಕ್ಷಿಸಲಾಗಿದೆ.







