‘ಬ್ಲೂವೇಲ್ ಚಾಲೆಂಜ್’ ಅನಾಹುತ: ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸಚಿವೆ ಉಮಾಶ್ರೀ ಸೂಚನೆ

ಬೆಂಗಳೂರು, ಆ. 19: ‘ಬ್ಲೂವೇಲ್ ಚಾಲೆಂಜ್’ ಎಂಬ ಅಂತರ್ಜಾಲ ಕ್ರೀಡೆ ಅನಾಹುತಗಳ ಬಗ್ಗೆ ರಾಜ್ಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲು ವ್ಯಾಪಕ ಪ್ರಚಾರಾಂದೋಲನ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅನೇಕ ಮಕ್ಕಳು ‘ಬ್ಲೂವೇಲ್ ಚಾಲೆಂಜ್’ ಎಂಬ ಅಂತರ್ಜಾಲ ಕ್ರೀಡೆಯನ್ನಾಡಿ, ಅದರಿಂದ ಪ್ರಭಾವಿತರಾಗಿ ಅಥವಾ ಪ್ರಚೋದಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕ್ರೀಡೆ ಅಂತರ್ಜಾಲದಲ್ಲಿ ಮಕ್ಕಳಿಗೆ ಸುಲಭವಾಗಿ ಸಿಗುವಂತಿದ್ದು, ಎಳೆಯ ಮನಸ್ಸುಗಳನ್ನು ಆಟದ ನೆಪದಲ್ಲಿ ಸಾವಿಗೆ ದೂಡುವಂತಹ ಪ್ರೇರಣೆ ನೀಡುವ ಮೂಲಕ ಸಾವಿನ ಸರಣಿಯನ್ನು ಆರಂಭಿಸಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಪ್ರಸಕ್ತ ಸಂದರ್ಭದಲ್ಲಿ ನಮ್ಮ ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದು ನಮ್ಮ ಆದ್ಯತೆ ಆಗಬೇಕೆಂದು ಸಲಹೆ ಮಾಡಿದ್ದಾರೆ.
‘ಬ್ಲೂವೇಲ್ ಚಾಲೆಂಜ್’ ಮತ್ತು ಇನ್ನಿತರ ಅನಾರೋಗ್ಯಕರ ಅಂತರ್ಜಾಲ ಆಟ ಮತ್ತು ವೆಬ್‌ಸೈಟ್ ಬಳಕೆಯ ಬಗ್ಗೆ ನಾವು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ವಿಶೇಷ ಜಾಗೃತಿ ಮೂಡಿಸಬೇಕಾಗಿದೆ ಎಂದು ಉಮಾಶ್ರೀ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.





