ಆ.22ಕ್ಕೆ ಸಂಪುಟ ವಿಸ್ತರಣೆ: ಮೂರು ಮಂದಿ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಆ. 19: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದ್ದು, ಆ.22ರ ಮಂಗಳವಾರ ಮೂರು ಮಂದಿ ನೂತನ ಸಚಿವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೇಲ್ಮನೆ ಸದಸ್ಯರಾದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ ಸಚಿವರಾಗುವುದು ಖಚಿತವಾಗಿದ್ದು, ಈ ಮೂವರು ಅಂದು ನೂತನ ಸಚಿವರಾಗಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ.19ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿತ್ತು. ಆದರೆ, ತುಮಕೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪಕ್ಷದ ಬೃಹತ್ ಕಾರ್ಯಕ್ರಮ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿತ್ತು.
ಆ.21ಕ್ಕೆ ನೂತನ ಸಚಿವರ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅಂದು ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಮುಂದೂಡಿದ್ದು, ಆ.22ರಂದು ಖಾಲಿ ಉಳಿದಿರುವ ಮೂರು ಸಚಿವ ಸ್ಥಾನಗಳು ಭರ್ತಿಯಾಗಲಿವೆ. ಯಾರಿಗೆ ಯಾವ ಖಾತೆ ಎಂಬುದು ಪ್ರಯಾಣ ವಚನ ಸ್ವೀಕರಿಸಿದ ಬಳಿಕ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.
ಕುರುಬ ಸಮುದಾಯದ ಎಚ್.ಎಂ.ರೇವಣ್ಣ, ಪರಿಶಿಷ್ಟ ಜಾತಿಯ ಆರ್.ಬಿ. ತಿಮ್ಮಾಪುರ್ ಹಾಗೂ ಲಿಂಗಾಯತ ಸಮುದಾಯದ ಕೆ.ಷಡಕ್ಷರಿ ನೂತನವಾಗಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ರೇವಣ್ಣ-ಅರಣ್ಯ, ತಿಮ್ಮಾಪುರ್-ಅಬಕಾರಿ ಹಾಗೂ ಷಡಕ್ಷರಿ- ಸಹಕಾರ ಖಾತೆ ನೀಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
‘ನಿರೀಕ್ಷೆಯಂತೆ ಗೃಹ ಖಾತೆಯನ್ನು ಸಚಿವ ಸಂಪುಟದ ಹಿರಿಯ ಸಚಿವ ಹಾಗೂ ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ ರೈ ಅವರಿಗೆ ನೀಡುವ ಸಾಧ್ಯತೆಗಳಿವೆ. ರಮಾನಾಥ ರೈ ಸೇರಿ ನೂತನ ಸಚಿವರ ಖಾತೆ ಹಂಚಿಕೆ ಆ.22ರಂದು ನಡೆಯಲಿದೆ ಎನ್ನಲಾಗಿದೆ’







