ಬಣಕಲ್‍ನಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಕುದುರೆಗಳ ಹಿಂಡು
ಬೆಳೆ ನಾಶದ ಕಾಟದಿಂದ ಮಲೆನಾಡಿಗೆ ಕುದುರೆಗಳನ್ನು ತಂದು ಬಿಟ್ಟಿರುವ ಶಂಕೆ

ಬಣಕಲ್, ಆ.19: ಬಣಕಲ್‍ನಲ್ಲಿ ಶನಿವಾರ ನಸುಕಿನಲ್ಲಿ ವಾರಸುದಾರರಿಲ್ಲದ ಬಲಿಷ್ಠವಾದ 40ಕ್ಕೂ ಅಧಿಕ ಕುದುರೆಗಳು ಕಾಣಿಸಿಕೊಂಡಿದ್ದು, ಈ ಕುರಿತು ಹಲವು ಅನುಮಾನಗಳ ಜತೆಗೆ ಅಚ್ಚರಿಗೆ ಕಾರಣವಾಗಿವೆ.
ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234ರಲ್ಲಿ ಬಣಕಲ್ ಸುಮಾರು ನಲ್ವತ್ತು ಕುದುರೆಗಳ ಹಿಂಡು ಗದ್ದೆ ಬಯಲಿನಲ್ಲಿ ಮೇಯುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಬಣಕಲ್ ಸುತ್ತಮುತ್ತಲ ಗ್ರಾಮಸ್ಥರು ಕುದುರೆಗಳನ್ನು ಕಂಡು ಖುಶಿಪಟ್ಟು ಸಾಕುವ ಹಿನ್ನಲೆಯಲ್ಲಿ ತಮಗೆ ಸಿಕ್ಕಂತಹ ಕುದುರೆಗಳನ್ನು ಹಗ್ಗದಲ್ಲಿ ಕಟ್ಟಿಕೊಂಡು ತಮ್ಮ, ತಮ್ಮ ಮನೆಗೆ ಕೊಂಡೊಯ್ದಿದ್ದಾರೆ.
ಕಂದು ಮಿಶ್ರಿತ ಹಾಗೂ ಬಿಳಿವರ್ಣದ ಕುದುರೆಗಳು ಹಿಂಡಿನಲ್ಲಿದೆ. ಕೆಲವು ಗ್ರಾಮಸ್ಥರು ಅವುಗಳನ್ನು ಹಿಡಿಯಲು ಹರಸಾಹಸವೇ ಪಟ್ಟು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಕೆಲವು ಜನರು ತಮಗೂ ಬೇಕು ತಮ್ಮವರಿಗೂ ಬೇಕು ಎಂಬ ಜೋಶ್‍ನೊಂದಿಗೆ ಪುಕ್ಕಟೆಯಾಗಿ ಸಿಕ್ಕ ಕುದುರೆಗಳನ್ನು ಕೊಂಡೊಯ್ದರೆ ಇನ್ನು ಕೆಲವು ಯುವಕರು ಕುದುರೆಯ ಮೇಲೆ ಕೂತು ಸವಾರಿ ಮಾಡಿ ಪುಕ್ಕಟೆ ಸಿಕ್ಕ ಕುದುರೆಯನ್ನು ಮನೆಗೆ ಸೇರಿಸಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಲೀಯರು ದೂರಿದ್ದಾರೆ.
ಬಣಕಲ್-ಕೊಟ್ಟಿಗೆಹಾರ ಮಧ್ಯೆ ಈ ಕುದುರೆಗಳ ಹಿಡಿಯುವ ಸಮಯದಲ್ಲಿ ಕೆಲ ಕಾಲ ರಸ್ತೆ ಸಂಚಾರಕ್ಕೂ ಅಡಚಣೆಯಾಯಿತು. ಕೂಡಲೇ ಬಣಕಲ್ ಪೋಲಿಸ್ ಮುಖ್ಯ ಪೇದೆ ರುದ್ರೇಶ್ ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಮೇವು ಕೊರತೆ ಮತ್ತು ಬೆಳೆನಾಶ ಅಥವಾ ಖಾಯಿಲೆಯ ಹಿನ್ನಲೆಯಲ್ಲಿ ಈ ಕುದುರೆಗಳ ಹಿಂಡನ್ನು ಯಾರೋ ತಂದು ಇಲ್ಲಿ ಬಿಟ್ಟಿರುವ ಸಾದ್ಯತೆಗಳಿವೆ. ಈ ಬಗ್ಗೆ ಎಲ್ಲಿಯೂ ಕುದುರೆ ಅಪಹರಣದ ಬಗ್ಗೆ ದೂರು ದಾಖಲಾಗಿಲ್ಲ. ದೂರು ದಾಖಲಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸದ್ಯಕ್ಕೆ ಗ್ರಾಮಸ್ಥರು ಕುದುರೆಗಳನ್ನು ಸಾಕುವ ಅವಕಾಶ ಸಿಕ್ಕಿದೆ.
“ಕುದುರೆಗಳ ಸ್ಥಳಾಂತರದ ಬಗ್ಗೆ ಪರಿಶೀಲಿಸಲಾಗುವುದು. ಕುದುರೆಗಳು ಹೇಗೆ ಇಲ್ಲಿಗೆ ಬಂದವು ಎನ್ನುವ ಬಗ್ಗೆ ಸದ್ಯಕ್ಕೆ ಪೂರಕ ಮಾಹಿತಿ ಲಭ್ಯವಿಲ್ಲ. ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗಾಗಲೇ ಮಾಹಿತಿ ಕಲೆ ಹಾಕಿದ್ದೇವೆ. ಆದರೆ ಅಲ್ಲಿಯ ಯಾವುದೇ ಕುದುರೆಗಳು ನಾಪತ್ತೆಯಾಗಿರುವ ಬಗ್ಗೆ ದೂರುಗಳು ಬಂದಿಲ್ಲ.
ಕುದುರೆ ಹುಡುಕಿಕೊಂಡು ಯಾರಾದರೂ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು :ರುದ್ರೇಶಗ, ಮುಖ್ಯಪೇದೆ.







