ಮಹಿಳೆಯ ಕೊಲೆ: ಆರೋಪಿ ಬಂಧನ
ಬೆಂಗಳೂರು, ಆ.19: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮನೆಗೆ ಕರೆಸಿಕೊಂಡು ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ಅಡುಗೆಭಟ್ಟ ಮಂಜುನಾಥನನ್ನು ಇಲ್ಲಿನ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುಬ್ಬಿಯ ಲಕ್ಷ್ಮೀಪುರ ಮೂಲದ ಆರೋಪಿ ಮಂಜುನಾಥ(27) ಬಂಧಿತನಾಗಿದ್ದು, ಇಲ್ಲಿನ ಬಿ.ಕೆ.ನಗರದ ಬಾಡಿಗೆ ಮನೆ ವಾಸವಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ.11ರಂದು ಆಂಧ್ರ ಪ್ರದೇಶದ ಹಿಂದೂಪುರ ಮೂಲದ ಅನಿತಾ ಎಂಬಾಕೆಯನ್ನು ಕೊಲೆ ಮಾಡಿ ಮನೆಗೆ ಬೀಗ ಹಾಕಿ ಕೊಂಡು ಪರಾರಿಯಾಗಿದ್ದ. ಎರಡು ದಿನಗಳ ನಂತರ ಮೃತದೇಹ ಕೊಳೆತು ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬಂದು ಮನೆಯ ಮಾಲಕರಿಗೆ ಪೊಲೀಸರಿಗೆ ವಿಷಯ ತಿಳಿಸಿದ್ದು ಬಾಗಿಲು ಒಡೆದು ನೋಡಿದಾಗ ಅನಿತಾ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಬಾಡಿಗೆಗಿದ್ದ ಮಂಜುನಾಥ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಿ ಕೇರಳದಲ್ಲಿ ಅಡಗಿರುವುದನ್ನು ಪತ್ತೆ ಮಾಡಿ ಬಂಧಿಸಿ ಕರೆತರಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.





